
ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿ ಮುಕ್ತಾಯದ ಬೆನ್ನಲ್ಲೇ ಟಿ20 ಸಿರೀಸ್ ಶುರುವಾಗಲಿದೆ. ಜನವರಿ 21 ರಿಂದ ಆರಂಭವಾಗಲಿರುವ ಈ ಸರಣಿಯಿಂದ ಟೀಮ್ ಇಂಡಿಯಾದ ಯುವ ಎಡಗೈ ದಾಂಡಿಗ ತಿಲಕ್ ವರ್ಮಾ ಹೊರಗುಳಿದಿದ್ದಾರೆ. ಅವರ ಬದಲಿಗೆ ಇದೀಗ ಶ್ರೇಯಸ್ ಅಯ್ಯರ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ವಿಜಯ ಹಝಾರೆ ಟೂರ್ನಿಯ ವೇಳೆ ತೊಡೆಸಂಧು ಸಮಸ್ಯೆಗೆ ಒಳಗಾಗಿದ್ದ ತಿಲಕ್ ವರ್ಮಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗಾಗಿಯೇ ನ್ಯೂಝಿಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ. ಇದಾಗ್ಯೂ ಅವರು ಟಿ20 ವಿಶ್ವಕಪ್ ತಂಡದಿಂದ ಹೊರಬಿದ್ದಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ.

ಏಕೆಂದರೆ ನ್ಯೂಝಿಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯ ಮೊದಲ ಮೂರು ಮ್ಯಾಚ್ಗಳಿಗೆ ಮಾತ್ರ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನುಳಿದ ಎರಡು ಮ್ಯಾಚ್ಗಳಲ್ಲಿ ತಿಲಕ್ ವರ್ಮಾ ಕಣಕ್ಕಿಳಿಯುವ ಸಾಧ್ಯತೆಯಿದೆ. ಹೀಗಾಗಿಯೇ ಅಯ್ಯರ್ ಅವರನ್ನು 3 ಪಂದ್ಯಗಳಿಗೆ ಆಯ್ಕೆ ಮಾಡಿದ್ದಾರೆ.

ಇತ್ತ ಸರ್ಜರಿಗೆ ಒಳಗಾಗಿರುವ ತಿಲಕ್ ವರ್ಮಾ ಮೇಲೆ ಬಿಸಿಸಿಐ ವೈದ್ಯಕೀಯ ತಂಡವು ನಿಗಾಯಿಟ್ಟಿದ್ದು, ಈ ಮೂಲಕ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಿದ್ದಾರೆ. ಅದರಂತೆ ಸಂಪೂರ್ಣ ಗುಣಮುಖರಾಗಿ ಜನವರಿ 25 ರ ಬಳಿಕ ತಿಲಕ್ ವರ್ಮಾ ಭಾರತ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ.

ಒಂದು ವೇಳೆ ತಿಲಕ್ ವರ್ಮಾ ಕೊನೆಯ ಎರಡು ಪಂದ್ಯಗಳ ವೇಳೆಗೆ ಸಂಪೂರ್ಣ ಫಿಟ್ನೆಸ್ ಸಾಧಿಸದೇ ಇದ್ದರೆ ಶ್ರೇಯಸ್ ಅಯ್ಯರ್ ತಂಡದಲ್ಲಿ ಮುಂದುವರೆಯಲಿದ್ದಾರೆ. ಅಲ್ಲದೆ ಟಿ20 ವಿಶ್ವಕಪ್ನಲ್ಲೂ ತಿಲಕ್ ವರ್ಮಾ ಬದಲಿಗೆ ಶ್ರೇಯಸ್ ಅಯ್ಯರ್ ಕಣಕ್ಕಿಳಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್.