Updated on: Jan 25, 2023 | 10:57 PM
ಇಂದೋರ್ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದ ಶುಭ್ಮನ್ ಗಿಲ್ ಮತ್ತೊಂದು ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದು ಕೂಡ ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ರೆಕಾರ್ಡ್ ಮುರಿದು ಎಂಬುದೇ ವಿಶೇಷ.
ಈ ಪಂದ್ಯದಲ್ಲಿ 78 ಎಸೆತಗಳನ್ನು ಎದುರಿಸಿದ್ದ ಶುಭ್ಮನ್ ಗಿಲ್ 5 ಭರ್ಜರಿ ಸಿಕ್ಸ್ ಹಾಗೂ 13 ಫೋರ್ನೊಂದಿಗೆ 112 ರನ್ ಬಾರಿಸಿದ್ದರು. ಇದಕ್ಕೂ ಮುನ್ನ 2ನೇ ಏಕದಿನ ಪಂದ್ಯದಲ್ಲಿ ಅಜೇಯ 40 ರನ್ ಹಾಗೂ ಮೊದಲ ಏಕದಿನ ಪಂದ್ಯದಲ್ಲಿ 208 ರನ್ಗಳ ಸಿಡಿಲಬ್ಬರದ ದ್ವಿಶತಕ ಸಿಡಿಸಿದ್ದರು.
ಇದರೊಂದಿಗೆ 3 ಪಂದ್ಯಗಳ ದ್ವಿಪಕ್ಷೀಯ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆ ಶುಭ್ಮನ್ ಗಿಲ್ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು.
ಕಿಂಗ್ ಕೊಹ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಒಟ್ಟು 283 ರನ್ ಬಾರಿಸಿದ್ದರು. ಇದು 3 ಪಂದ್ಯಗಳ ದ್ವಿಪಕ್ಷೀಯ ಸರಣಿಯಲ್ಲಿ ಭಾರತೀಯ ಆಟಗಾರನೊಬ್ಬ ಕಲೆಹಾಕಿದ ಅತ್ಯಧಿಕ ರನ್ ಆಗಿತ್ತು.
ಇದೀಗ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳಲ್ಲಿ 1 ದ್ವಿಶತಕ ಹಾಗೂ ಶತಕದೊಂದಿಗೆ ಶುಭ್ಮನ್ ಗಿಲ್ ಒಟ್ಟು 360 ರನ್ ಬಾರಿಸಿದ್ದಾರೆ. ಈ ಮೂಲಕ ಕಿಂಗ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿ ಗಿಲ್ ಹೊರ ರೆಕಾರ್ಡ್ ನಿರ್ಮಿಸಿದ್ದಾರೆ.
ಇದಕ್ಕೂ ಮುನ್ನ ಏಕದಿನ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 1000 ರನ್ ಪೂರೈಸಿದ ವಿರಾಟ್ ಕೊಹ್ಲಿಯ ದಾಖಲೆಯನ್ನು ಗಿಲ್ ಮುರಿದಿದ್ದರು. ಕೊಹ್ಲಿ 24 ಇನಿಂಗ್ಸ್ ಮೂಲಕ ಈ ಸಾಧನೆ ಮಾಡಿದ್ದರು.
ಆದರೆ ಕೇವಲ ಕೇವಲ 19 ಇನಿಂಗ್ಸ್ ಮೂಲಕ ಶುಭ್ಮನ್ ಗಿಲ್ ಸಾವಿರ ರನ್ ಪೂರೈಸಿ ಹೊಸ ದಾಖಲೆ ನಿರ್ಮಿಸಿದ್ದರು. ಅಂದರೆ ಕಿಂಗ್ ಕೊಹ್ಲಿಗಿಂತ 5 ಇನಿಂಗ್ಸ್ ಕಡಿಮೆ ಅವಧಿಯಲ್ಲಿ ಗಿಲ್ ಈ ಸಾಧನೆ ಮಾಡಿದ್ದಾರೆ. ಇದೀಗ 3 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಶುಭ್ಮನ್ ಗಿಲ್ ಪಾತ್ರರಾಗಿದ್ದಾರೆ.