
ಇಂಜುರಿಯಿಂದ ಚೇತರಿಸಿಕೊಂಡಿರುವ ಟೀಂ ಇಂಡಿಯಾ ನಾಯಕ ಶುಭ್ಮನ್ ಗಿಲ್ ಕ್ರಿಕೆಟ್ ಅಂಗಳಕ್ಕೆ ಮತ್ತೆ ಕಾಲಿಟ್ಟಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಇದು ಟೀಂ ಇಂಡಿಯಾಕ್ಕೆ ಶುಭ ಸೂಚಕವಾಗಿದೆ. ಆದರೆ ಇಂಜುರಿಯಿಂದ ಚೇತರಿಸಿಕೊಂಡಿರುವ ಗಿಲ್, ತಮ್ಮ ಫಾರ್ಮ್ ಕಂಡುಕೊಳ್ಳುವಲ್ಲಿ ಮಾತ್ರ ಎಡವಿದ್ದಾರೆ.

ಏಕದಿನ ಸರಣಿಗೆ ತಯಾರಿಯ ದೃಷ್ಟಿಯಿಂದ ದೇಶಿ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಇಂದು ಕಣಕ್ಕಿಳಿದಿದ್ದ ಶುಭ್ಮನ್ ಗಿಲ್ ರನ್ ಕಲೆಹಾಕುವಲ್ಲಿ ವಿಫಲರಾಗಿದ್ದಾರೆ. ಪಂಜಾಬ್ ಪರ ಮೊದಲ ಪಂದ್ಯವನ್ನಾಡಿದ ಗಿಲ್ ಗೋವಾ ವಿರುದ್ಧದ ಈ ಪಂದ್ಯದಲ್ಲಿ 12 ಎಸೆತಗಳನ್ನು ಎದುರಿಸಿ ಕೇವಲ 11 ರನ್ ಗಳಿಸಿ ಔಟಾದರು. ತಮ್ಮ ಇನ್ನಿಂಗ್ಸ್ನಲ್ಲಿ ಎರಡು ಬೌಂಡರಿ ಬಾರಿಸಲಷ್ಟೇ ಶಕ್ತರಾದ ಗಿಲ್, ವೇಗಿ ವಾಸುಕಿ ಕೌಶಿಕ್ ಎಸೆದ ಐದನೇ ಓವರ್‌ನ ಮೊದಲ ಎಸೆತದಲ್ಲಿಯೇ ಔಟಾದರು.

ಮೇಲೆ ಹೇಳಿದಂತೆ ಜನವರಿ 11 ರಿಂದ ಪ್ರಾರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಶುಭಮನ್ ಗಿಲ್ ತಂಡವನ್ನು ಮುನ್ನಡೆಸಲಿದ್ದಾರೆ, ಆದರೆ ಅವರ ಫಾರ್ಮ್ ಪ್ರಸ್ತುತ ಕಳಪೆಯಾಗಿದೆ. ಗಿಲ್ ಅವರ ದೊಡ್ಡ ಸಮಸ್ಯೆ ಎಂದರೆ ಟಿ20 ಮತ್ತು ಏಕದಿನ ಮಾದರಿಗಳಲ್ಲಿ ಅವರ ಕಳಪೆ ಪ್ರದರ್ಶನ. ಫೆಬ್ರವರಿ 20, 2025 ರಿಂದ ಗಿಲ್ ಏಕದಿನ ಪಂದ್ಯಗಳಲ್ಲಿ ಒಂದು ಅರ್ಧಶತಕವನ್ನೂ ಬಾರಿಸಿಲ್ಲ. ತಮ್ಮ ಕೊನೆಯ ಎಂಟು ಏಕದಿನ ಇನ್ನಿಂಗ್ಸ್‌ಗಳಲ್ಲಿ ರನ್ ಬರ ಎದುರಿಸಿರುವ ಗಿಲ್ ಅವರ ಅತ್ಯುತ್ತಮ ಸ್ಕೋರ್ ಕೇವಲ 46 ರನ್ ಆಗಿದೆ.

ಶುಬ್‌ಮನ್ ಗಿಲ್ ಟಿ 20 ಸ್ವರೂಪದಲ್ಲಿಯೂ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ವರ್ಷ ಅವರು ಈ ಸ್ವರೂಪದಲ್ಲಿಯೂ ಒಂದು ಅರ್ಧಶತಕ ಬಾರಿಸಲಿಲ್ಲ. ಈ ಕಳಪೆ ಫಾರ್ಮ್ ಕಾರಣ, ಅವರನ್ನು ಟಿ20 ತಂಡದಿಂದ ಕೈಬಿಡಲಾಯಿತು. ಉಪನಾಯಕನಾಗಿದ್ದರೂ ಅವರನ್ನು ಟಿ20 ವಿಶ್ವಕಪ್ ತಂಡದಿಂದ ಕೈಬಿಡಲಾಯಿತು. ಹೀಗಾಗಿ ಗಿಲ್ ಶೀಘ್ರದಲ್ಲೇ ದೊಡ್ಡ ಇನ್ನಿಂಗ್ಸ್ ಆಡದಿದ್ದರೆ, ಅವರ ಸಮಸ್ಯೆಗಳು ಇನ್ನಷ್ಟು ಹದಗೆಡುತ್ತವೆ.

ಶುಬ್‌ಮನ್ ಗಿಲ್‌ಗೆ ವೈಟ್-ಬಾಲ್ ಕ್ರಿಕೆಟ್ ದುಃಸ್ವಪ್ನದಂತೆ ಕಾಡುತ್ತಿದೆ. ಟಿ20 ಮತ್ತು ಏಕದಿನ ಸೇರಿದಂತೆ ಒಟ್ಟು 23 ಪಂದ್ಯಗಳಲ್ಲಿ ಗಿಲ್ ರನ್ ಗಳಿಸಲು ವಿಫಲರಾಗಿದ್ದಾರೆ. ಏತನ್ಮಧ್ಯೆ, ಎರಡು ತಿಂಗಳ ನಂತರ ಮೈದಾನಕ್ಕೆ ಮರಳಿದ ಉಪನಾಯಕ ಶ್ರೇಯಸ್ ಅಯ್ಯರ್ ಹಿಮಾಚಲ ವಿರುದ್ಧ 53 ಎಸೆತಗಳಲ್ಲಿ 82 ರನ್ ಗಳಿಸಿದರೆ, ನಾಯಕ ಗಿಲ್ ಮಾತ್ರ ತಮ್ಮ ಕಳಪೆ ಪ್ರದರ್ಶನವನ್ನು ಮುಂದುವರೆಸಿ ಮ್ಯಾನೇಜ್ಮೆಂಟ್ ಚಿಂತೆ ಹೆಚ್ಚಿಸಿದ್ದಾರೆ.