
ಎಡ್ಜ್ಬಾಸ್ಟನ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ (Shubman Gill) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 269 ರನ್ ಬಾರಿಸಿದ್ದ ಗಿಲ್, ದ್ವಿತೀಯ ಇನಿಂಗ್ಸ್ನಲ್ಲಿ 161 ರನ್ ಕಲೆಹಾಕಿ ಮಿಂಚಿದ್ದಾರೆ. ಈ ಮೂಲಕ ಒಂದೇ ಪಂದ್ಯದಲ್ಲಿ ಬರೋಬ್ಬರಿ 430 ರನ್ಗಳಿಸಿದ್ದಾರೆ.

ಇತ್ತ ಒಂದೇ ಪಂದ್ಯದಲ್ಲಿ 430 ರನ್ ಕಲೆಹಾಕಿದರೂ, ಟೆಸ್ಟ್ ಕ್ರಿಕೆಟ್ನಲ್ಲಿ ವಿಶ್ವ ದಾಖಲೆಯೊಂದನ್ನು ಬರೆಯುವ ಅವಕಾಶವೊಂದನ್ನು ಶುಭ್ಮನ್ ಗಿಲ್ ತಪ್ಪಿಸಿಕೊಂಡರು. ಅದು ಕೂಡ ಕೇವಲ 27 ರನ್ಗಳಿಂದ. ಅಂದರೆ ಟೆಸ್ಟ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ವಿಶ್ವ ದಾಖಲೆ ಗ್ರಹಾಂ ಗೂಚ್ ಹೆಸರಿನಲ್ಲಿದೆ.

1990 ರಲ್ಲಿ ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಗ್ರಹಾಂ ಗೂಚ್ ಮೊದಲ ಇನಿಂಗ್ಸ್ನಲ್ಲಿ 333 ರನ್ ಬಾರಿಸಿದ್ದರು. ಅಲ್ಲದೆ ದ್ವಿತೀಯ ಇನಿಂಗ್ಸ್ನಲ್ಲಿ 123 ರನ್ ಕಲೆಹಾಕಿದ್ದರು. ಈ ಮೂಲಕ ಒಂದೇ ಪಂದ್ಯದಲ್ಲಿ 456 ರನ್ಗಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.

ಇತ್ತ ಶುಭ್ಮನ್ ಗಿಲ್ ಮೊದಲ ಇನಿಂಗ್ಸ್ನಲ್ಲಿ 269 ರನ್ ಹಾಗೂ ದ್ವಿತೀಯ ಇನಿಂಗ್ಸ್ನಲ್ಲಿ 161 ರನ್ಗಳಿಸಿ ಈ ವಿಶ್ವ ದಾಖಲೆಯ ಸಮೀಪಕ್ಕೆ ತಲುಪಿದ್ದರು. ಆದರೆ ದ್ವಿತೀಯ ಇನಿಂಗ್ಸ್ನಲ್ಲಿ 161 ರನ್ಗಳಿಸಿ ಔಟಾದರು. ಇದರೊಂದಿಗೆ ಶುಭ್ಮನ್ ಗಿಲ್ ಅವರ ವೈಯುಕ್ತಿಕ ಸ್ಕೋರ್ 430 ರನ್ಗಳೊಂದಿಗೆ ಅಂತ್ಯಗೊಂಡಿತು.

ಒಂದು ವೇಳೆ ದ್ವಿತೀಯ ಇನಿಂಗ್ಸ್ನಲ್ಲಿ ಶುಭ್ಮನ್ ಗಿಲ್ ಹೆಚ್ಚುವರಿ 27 ರನ್ ಕಲೆಹಾಕಿದ್ದರೆ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಅತ್ಯಧಿಕ ರನ್ಗಳಿಸಿದ ಗ್ರಹಾಂ ಗೂಚ್ (456) ಅವರ ವಿಶ್ವ ದಾಖಲೆಯನ್ನು ಮುರಿಯಬಹುದಿತ್ತು. ಆದರೆ ಈ ದಾಖಲೆಯನ್ನು ತಪ್ಪಿಸಿಕೊಂಡ ಗಿಲ್, ಟೆಸ್ಟ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ರನ್ಗಳಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.