- Kannada News Photo gallery Cricket photos Shubman Gill's England Domination: Can He Break Bradman's Record?
IND vs ENG: ಡಾನ್ ಬ್ರಾಡ್ಮನ್ರ ಶ್ರೇಷ್ಠ ದಾಖಲೆ ಮುರಿಯಲು ಗಿಲ್‌ಗೆ ಇನ್ನೇಷ್ಟು ರನ್ ಬೇಕು?
Shubman Gill's England Domination: ಶುಭಮನ್ ಗಿಲ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ನಾಲ್ಕು ಇನ್ನಿಂಗ್ಸ್‌ಗಳಲ್ಲಿ 600 ಕ್ಕೂ ಹೆಚ್ಚು ರನ್ ಗಳಿಸಿ ಅವರು ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದಾರೆ. ಇದರಿಂದಾಗಿ, ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿರುವ ಡಾನ್ ಬ್ರಾಡ್‌ಮನ್ ಅವರ ದಾಖಲೆಯನ್ನು ಮುರಿಯುವ ಸಾಧ್ಯತೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಉಳಿದ ಪಂದ್ಯಗಳಲ್ಲಿ ಗಿಲ್ ಹೇಗೆ ಆಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
Updated on: Jul 06, 2025 | 7:48 PM

ಟೀಂ ಇಂಡಿಯಾದ ನಾಯಕನಾಗಿ ಶುಭಮನ್ ಗಿಲ್ ಅವರ ಪ್ರಯಾಣ ಗೆಲುವಿನೊಂದಿಗೆ ಪ್ರಾರಂಭವಾಗಿಲ್ಲದಿರಬಹುದು. ಆದರೆ ಬ್ಯಾಟ್ಸ್‌ಮನ್ ಆಗಿ ಅವರ ಆಟ ಎಲ್ಲರ ಹೃದಯ ಗೆದ್ದಿದೆ. ನಾಯಕನಾಗುವ ಮೊದಲು ಮತ್ತು ಈ ಇಂಗ್ಲೆಂಡ್ ಪ್ರವಾಸದ ಮೊದಲು, ಗಿಲ್ ಅವರ ಟೆಸ್ಟ್ ದಾಖಲೆಯು ಪ್ರಶ್ನಾರ್ಹವಾಗಿತ್ತು.

ಇಂಗ್ಲೆಂಡ್‌ನಲ್ಲಿ ಗಿಲ್ ಒಂದೇ ಒಂದು ಶತಕ ಗಳಿಸಿರಲಿಲ್ಲ. ಆದರೆ ಈಗ ಗಿಲ್ ಕೇವಲ 4 ಇನ್ನಿಂಗ್ಸ್‌ಗಳಲ್ಲಿ ಸುಮಾರು 600 ರನ್‌ಗಳನ್ನು ಗಳಿಸುವ ಮೂಲಕ ತಮ್ಮ ಸಾಮರ್ಥ್ಯದ ಬಗ್ಗೆ ಎದ್ದಿರುವ ಪ್ರತಿಯೊಂದು ಪ್ರಶ್ನೆಗೆ ಉತ್ತರಿಸಿದ್ದಾರೆ. ಇದೀಗ ಎಲ್ಲರೂ ಶ್ರೇಷ್ಠ ಬ್ಯಾಟ್ಸ್‌ಮನ್ ಡಾನ್ ಬ್ರಾಡ್‌ಮನ್ ಅವರ ಅತಿ ಹೆಚ್ಚು ರನ್‌ಗಳ ದಾಖಲೆಯನ್ನು ಮುರಿಯಲು ಅವರಿಗೆ ಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ?.

ಈ ಸರಣಿಯ ಆರಂಭಕ್ಕೂ ಮುನ್ನ, ಶುಭ್ಮನ್ ಗಿಲ್ ಈ 5 ಟೆಸ್ಟ್ ಪಂದ್ಯಗಳಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಬೇಕೆಂದು ಬಯಸಿದ್ದಾಗಿ ಹೇಳಿದ್ದರು. ಲೀಡ್ಸ್ ಮತ್ತು ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಮೊದಲ 2 ಟೆಸ್ಟ್‌ಗಳಲ್ಲಿ ದ್ವಿಶತಕ ಸೇರಿದಂತೆ 3 ಶತಕಗಳನ್ನು ಗಳಿಸುವ ಮೂಲಕ ಗಿಲ್ ಇಲ್ಲಿಯವರೆಗೆ ಇದನ್ನು ಸಾಬೀತುಪಡಿಸಿದ್ದಾರೆ.

ಈ ಪ್ರವಾಸದ ಮೊದಲು, ಶುಭಮನ್ ಗಿಲ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 59 ಇನ್ನಿಂಗ್ಸ್‌ಗಳನ್ನು ಆಡಿದ್ದರು, ಅದರಲ್ಲಿ ಕೇವಲ 1893 ರನ್‌ಗಳು ಅವರ ಬ್ಯಾಟ್‌ನಿಂದ ಹರಿದಿದ್ದವು. ಡಿಸೆಂಬರ್ 2020 ರಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಗಿಲ್‌ಗೆ ಸುಮಾರು 5 ವರ್ಷಗಳಲ್ಲಿ 2 ಸಾವಿರ ರನ್ ಸಹ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಆದರೆ ಇಂಗ್ಲೆಂಡ್‌ನಲ್ಲಿ ಅವರ ಆಟವೇ ಬದಲಾಗಿದೆ.

ಲೀಡ್ಸ್ ಟೆಸ್ಟ್ನಲ್ಲಿ ಶತಕ ಬಾರಿಸಿದ್ದ ಗಿಲ್, ಇದೀಗ ನಡೆಯುತ್ತಿರುವ ಎಡ್ಜ್‌ಬಾಸ್ಟನ್ ಟೆಸ್ಟ್ನ ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಒಂದು ಶತಕ ಬಾರಿಸುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಈ ರೀತಿಯಾಗಿ, ಅವರು ಇಲ್ಲಿಯವರೆಗೆ ಸರಣಿಯ ಕೇವಲ 4 ಇನ್ನಿಂಗ್ಸ್‌ಗಳಲ್ಲಿ 585 ರನ್ ಸಿಡಿಸಿದ್ದಾರೆ.

ಈ ಸರಣಿಯಲ್ಲಿ ಗಿಲ್ ಯಾವ ರೀತಿಯ ಬ್ಯಾಟಿಂಗ್ ಮಾಡಿದ್ದಾರೆಂದು ಹೇಳಲು ಇದು ಸಾಕು. ಗಿಲ್ ಈಗಾಗಲೇ ಅನೇಕ ದೊಡ್ಡ ದಾಖಲೆಗಳನ್ನು ಮುರಿದಿದ್ದು, ಇದೀಗ ಸರಣಿಯೊಂದರಲ್ಲಿ ಅತಿ ಹೆಚ್ಚು ರನ್ ಬಾರಿಸಿದ ದಾಖಲೆ ಹೊಂದಿರುವ ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟ್ಸ್‌ಮನ್ ಬ್ರಾಡ್‌ಮನ್ ಅವರ ದಾಖಲೆಯನ್ನು ಮುರಿಯಲು ಸಾಧ್ಯವಾಗುತ್ತದೆಯೇ? ಎಂಬ ಪ್ರಶ್ನೆ ಮೂಡಿದೆ.

ಕ್ರಿಕೆಟ್ ಇತಿಹಾಸದಲ್ಲಿ 99.94 ಸರಾಸರಿ ಹೊಂದಿರುವ ಏಕೈಕ ಬ್ಯಾಟ್ಸ್‌ಮನ್ ಬ್ರಾಡ್ಮನ್, ಸುಮಾರು 95 ವರ್ಷಗಳ ಹಿಂದೆ 1930 ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 974 ರನ್ ಬಾರಿಸಿದ್ದರು. ಇದು ಈವರೆಗಿನ ದಾಖಲೆಯಾಗಿದ್ದು, ಯಾವೊಬ್ಬ ಬ್ಯಾಟ್ಸ್ಮನ್ಗೂ ಬ್ರಾಡ್ಮನ್ ಅವರ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ. ಅನೇಕ ಬ್ಯಾಟ್ಸ್‌ಮನ್‌ಗಳು ಈ ದಾಖಲೆಯ ಹತ್ತಿರಕ್ಕೆ ಬಂದರಾದರು ಯಾರೂ 900 ರನ್‌ಗಳ ಗಡಿಯನ್ನು ದಾಟಲು ಸಾಧ್ಯವಾಗಲಿಲ್ಲ.

ಇದೀಗ ಗಿಲ್ ಈ ದಾಖಲೆಯನ್ನು ಮುರಿಯುವ ಸಮೀಪದಲ್ಲಿದ್ದಾರೆ. ಈ ಟೆಸ್ಟ್ ಸರಣಿಯಲ್ಲಿ ಇನ್ನೂ 3 ಪಂದ್ಯಗಳು ಉಳಿದಿವೆ. ಅಂತಹ ಪರಿಸ್ಥಿತಿಯಲ್ಲಿ, ಗಿಲ್‌ಗೆ 6 ಇನ್ನಿಂಗ್ಸ್‌ಗಳನ್ನು ಆಡುವ ಅವಕಾಶವಿರುತ್ತದೆ. ಗಿಲ್ ಈ 6 ಇನ್ನಿಂಗ್ಸ್‌ಗಳಲ್ಲಿ 389 ರನ್ ಗಳಿಸಿದರೆ, ಅವರು ಬ್ರಾಡ್ಮನ್ ದಾಖಲೆಯನ್ನು ಮುರಿಯುತ್ತಾರೆ.
