
ವಿಶಾಖಪಟ್ಟಣಂನಲ್ಲಿನ ವೈಎಸ್ ರಾಜಶೇಖರ ರೆಡ್ಡಿ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಶುಭ್ಮನ್ ಗಿಲ್ (Shubman Gill) ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 34 ರನ್ ಬಾರಿಸಿ ಔಟಾಗಿದ್ದ ಗಿಲ್ ದ್ವಿತೀಯ ಇನಿಂಗ್ಸ್ನಲ್ಲಿ ಮೂರಂಕಿ ಮೊತ್ತಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಟೀಮ್ ಇಂಡಿಯಾ ಮೊತ್ತ 29 ರನ್ಗಳಿದ್ದಾಗ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶುಭ್ಮನ್ ಗಿಲ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಅವರ ಬ್ಯಾಟ್ನಿಂದ ಕೇವಲ 59 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು. ಹಾಫ್ ಸೆಂಚುರಿ ಬಳಿಕ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಗಿಲ್ ಅವಕಾಶ ಸಿಕ್ಕಾಗೆಲ್ಲಾ ಇಂಗ್ಲೆಂಡ್ ಬೌಲರ್ಗಳ ಬೆಂಡೆತ್ತಿದರು.

ಈ ಮೂಲಕ 132 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್ ಹಾಗೂ 11 ಫೋರ್ಗಳೊಂದಿಗೆ ಶತಕ ಪೂರೈಸಿದರು. ವಿಶೇಷ ಎಂದರೆ ಮಾರ್ಚ್ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ನಲ್ಲಿ ಕೊನೆಯ ಬಾರಿ ಶತಕ ಸಿಡಿಸಿದ್ದ ಗಿಲ್ ಆ ಬಳಿಕ ಸತತ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಗಿದ್ದರು. ಇದೀಗ ಶತಕದೊಂದಿಗೆ ಶುಭ್ಮನ್ ಮತ್ತೆ ಫಾರ್ಮ್ ಕಂಡುಕೊಂಡಿದ್ದಾರೆ.

ಇದು ಶುಭ್ಮನ್ ಗಿಲ್ ಅವರ ಮೂರನೇ ಟೆಸ್ಟ್ ಶತಕ. ಇದಕ್ಕೂ ಮುನ್ನ ಬಾಂಗ್ಲಾದೇಶ್ (vs 110 ರನ್ಸ್) ಮತ್ತು ಆಸ್ಟ್ರೇಲಿಯಾ (vs 128 ರನ್ಸ್) ವಿರುದ್ಧ ಭರ್ಜರಿ ಶತಕಗಳನ್ನು ಬಾರಿಸಿದ್ದಾರೆ. ಇದೀಗ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿ ಮೂರನೇ ಬಾರಿ ಮೂರಂಕಿ ರನ್ ಕಲೆಹಾಕಿದ್ದಾರೆ.

ಶುಭ್ಮನ್ ಗಿಲ್ ಅವರ ಈ ಭರ್ಜರಿ ಶತಕದ ನೆರವಿನಿಂದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. 52 ಓವರ್ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ 4 ವಿಕೆಟ್ ಕಳೆದುಕೊಂಡು 201 ರನ್ ಕಲೆಹಾಕಿದೆ. ಸದ್ಯ ಕ್ರೀಸ್ನಲ್ಲಿ ಶುಭ್ಮನ್ ಗಿಲ್ (100) ಹಾಗೂ ಅಕ್ಷರ್ ಪಟೇಲ್ (33) ಬ್ಯಾಟಿಂಗ್ ಮಾಡುತ್ತಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ಪರ ಯಶಸ್ವಿ ಜೈಸ್ವಾಲ್ (209) ದ್ವಿಶತಕ ಬಾರಿಸಿ ಮಿಂಚಿದ್ದರು. ಈ ಡಬಲ್ ಸೆಂಚುರಿ ನೆರವಿನಿಂದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 396 ರನ್ ಕಲೆಹಾಕಿತು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ದಾಳಿಗೆ ತತ್ತರಿಸಿದೆ. ಪರಿಣಾಮ ಕೇವಲ 45 ರನ್ ನೀಡಿ ಬುಮ್ರಾ 6 ವಿಕೆಟ್ ಕಬಳಿಸಿ ಮಿಂಚಿದರು. ಈ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ನಲ್ಲಿ 253 ರನ್ಗಳಿಗೆ ಆಲೌಟ್ ಆಗಿದ್ದಾರೆ.

ಇದಾದ ಬಳಿಕ 143 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಪರ ಶುಭ್ಮನ್ ಗಿಲ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ದ್ವಿತೀಯ ಇನಿಂಗ್ಸ್ನಲ್ಲಿ ಭಾರತ ತಂಡವು 346* ರನ್ಗಳ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
Published On - 1:17 pm, Sun, 4 February 24