
ಭಾರತ ಟೆಸ್ಟ್ ತಂಡದ ಹೊಸ ನಾಯಕನಾಗಿ, ಶುಭ್ಮನ್ ಗಿಲ್ ತಮ್ಮ ಮೊದಲ ಸರಣಿಯಲ್ಲೇ ಇತಿಹಾಸ ಸೃಷ್ಟಿಸಿದರು. ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದ ಗಿಲ್, ಇಂಗ್ಲೆಂಡ್ ಪ್ರವಾಸದಲ್ಲಿ ಟೆಸ್ಟ್ ಸರಣಿಯಲ್ಲಿ ತಮ್ಮ ಬ್ಯಾಟ್‌ನಿಂದ ರನ್‌ಗಳ ಮಳೆ ಸುರಿಸುತ್ತಾ ಅನೇಕ ದಾಖಲೆಗಳನ್ನು ಸೃಷ್ಟಿಸಿದರು. ಗಿಲ್ ಈ ಸರಣಿಯನ್ನು ಟಾಪ್ ಸ್ಕೋರರ್ ಆಗಿಯೂ ಕೊನೆಗೊಳಿಸಿದರು.

ಆದರೆ ಅನೇಕ ದಾಖಲೆಗಳನ್ನು ಮುರಿದ ಶುಭ್ಮನ್ ಗಿಲ್, ಅದೊಂದು ದೊಡ್ಡ ದಾಖಲೆಯನ್ನು ಮುರಿಯುವಲ್ಲಿ ಕೂದಲೆಳೆ ಅಂತರದಲ್ಲಿ ವಂಚಿತರಾದರು. ಓವಲ್‌ನಲ್ಲಿ ನಡೆದ ಸರಣಿಯ ಕೊನೆಯ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ವಿಫಲರಾದ ಗಿಲ್, ಶ್ರೇಷ್ಠ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಅವರ 54 ವರ್ಷಗಳ ಹಳೆಯ ದಾಖಲೆಯನ್ನು ಮುರಿಯಲು ಸಾಧ್ಯವಾಗಲಿಲ್ಲ.

ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದೊಂದಿಗೆ ಗಿಲ್ ಅವರ ನಾಯಕತ್ವ ಪ್ರಾರಂಭವಾಯಿತು. ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿಯೇ ಅದ್ಭುತ ಶತಕ ಬಾರಿಸುವ ಮೂಲಕ ಉತ್ತಮ ಆರಂಭ ಪಡೆದುಕೊಂಡ ಗಿಲ್ ಮೊದಲೆರಡು ಟೆಸ್ಟ್ಗಳಲ್ಲಿ ರನ್‌ಗಳ ಮಳೆ ಹರಿಸಿದರು. ಆದರೆ ಲಾರ್ಡ್ಸ್ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ವಿಫಲರಾದರು. ಇದೀಗ ಸರಣಿಯ ಕೊನೆಯ ಪಂದ್ಯದಲ್ಲಿಯೂ ಗಿಲ್ ಬ್ಯಾಟ್ ಮೌನಕ್ಕೆ ಶರಣಾಯಿತು.

ಓವಲ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 21 ರನ್ ಬಾರಿಸಿ ಔಟಾಗಿದ್ದ ಗಿಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 11 ರನ್‌ಗಳಿಗೆ ಸುಸ್ತಾದರು. ಈ ವೈಫಲ್ಯದೊಂದಿಗೆ ಗಿಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಟೆಸ್ಟ್ ಇತಿಹಾಸದಲ್ಲಿ 54 ವರ್ಷಗಳಿಂದ ಯಾರಿಂದಲು ಮುರಿಯಲು ಸಾಧ್ಯವಾಗದ ದಾಖಲೆಯನ್ನು ಮುರಿಯುವಲ್ಲಿ ಎಡವಿದರು.

ವಾಸ್ತವವಾಗಿ ಟೆಸ್ಟ್ ಸರಣಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯನೆಂಬ ದಾಖಲೆ ಸುನಿಲ್ ಗವಾಸ್ಕರ್ ಹೆಸರಿನಲ್ಲಿದೆ. 1971 ರಲ್ಲಿ ತಮ್ಮ ಮೊದಲ ಸರಣಿಯಲ್ಲಿಯೇ ಗವಾಸ್ಕರ್ ಈ ದಾಖಲೆ ಮಾಡಿದ್ದರು. ನಂತರ ಗವಾಸ್ಕರ್ ವೆಸ್ಟ್ ಇಂಡೀಸ್‌ನಲ್ಲಿ 774 ರನ್ ಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಅವರ ನಂತರ ಯಶಸ್ವಿ ಜೈಸ್ವಾಲ್ ಕಳೆದ ವರ್ಷ 712 ರನ್ ಬಾರಿಸುವ ಮೂಲಕ ಗವಾಸ್ಕರ್ ದಾಖಲೆಯ ಸನಿಹಕ್ಕೆ ಬಂದು ಎಡವಿದ್ದರು.

ಈ ಬಾರಿ ಶುಭ್ಮನ್ ಗಿಲ್‌ಗೆ ಈ ಅವಕಾಶ ಸಿಕ್ಕಿತ್ತು. ಈ ದಾಖಲೆಯನ್ನು ಮುರಿಯಲು ಸರಣಿಯ ಕೊನೆಯ ಇನ್ನಿಂಗ್ಸ್‌ನಲ್ಲಿ ಅವರಿಗೆ ಕೇವಲ 32 ರನ್‌ಗಳ ಅಗತ್ಯವಿತ್ತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಗಿಲ್ 11 ರನ್‌ಗಳನ್ನು ಗಳಿಸಿ ಔಟಾದರು. ಅಂತಿಮವಾಗಿ ಗಿಲ್ ಕೇವಲ 21 ರನ್‌ಗಳಿಂದ ಈ ದಾಖಲೆಯನ್ನು ಮುರಿಯುವ ಅವಕಾಶವನ್ನು ತಪ್ಪಿಸಿಕೊಂಡರು.

ಆದಾಗ್ಯೂ ಗಿಲ್ ಈ ಸರಣಿಯ 10 ಇನ್ನಿಂಗ್ಸ್‌ಗಳಲ್ಲಿ 75.4 ಸರಾಸರಿಯಲ್ಲಿ ಅತಿ ಹೆಚ್ಚು ಅಂದರೆ 754 ರನ್ ಗಳಿಸಿದ್ದಾರೆ. ಇದರಲ್ಲಿ ದ್ವಿಶತಕ ಸೇರಿದಂತೆ ಒಟ್ಟು 4 ಶತಕಗಳು ಸೇರಿವೆ. ಇದು ಇಂಗ್ಲಿಷ್ ನೆಲದಲ್ಲಿ ಯಾವುದೇ ಏಷ್ಯನ್ ಬ್ಯಾಟ್ಸ್‌ಮನ್ ಸರಣಿಯಲ್ಲಿ ಗಳಿಸಿದ ಅತಿ ಹೆಚ್ಚು ರನ್‌ಗಳಾಗಿವೆ. ಅಲ್ಲದೆ, ಎಡ್ಜ್‌ಬಾಸ್ಟನ್‌ನಲ್ಲಿ 269 ರನ್‌ಗಳ ಇನ್ನಿಂಗ್ಸ್‌ನೊಂದಿಗೆ, ಅವರು ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.