ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ನ್ಯೂಝಿಲೆಂಡ್ ವೇಗಿ ಲಾಕಿ ಫರ್ಗುಸನ್ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ. ದಂಬುಲ್ಲಾದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಇನಿಂಗ್ಸ್ ಆರಂಭಿಸಿದ ನ್ಯೂಝಿಲೆಂಡ್ ತಂಡದ ಪರ ವಿಲ್ ಯಂಗ್ 30 ರನ್ ಬಾರಿಸಿದರೆ, ಮಿಚೆಲ್ ಸ್ನಾಂಟ್ನರ್ 19 ರನ್ಗಳಿಸಿದರು. ಇನ್ನು ಜೋಶ್ ಕಾರ್ಲ್ಸನ್ 24 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ನ್ಯೂಝಿಲೆಂಡ್ 19.3 ಓವರ್ಗಳಲ್ಲಿ 108 ರನ್ಗಳಿಸಿ ಆಲೌಟ್ ಆಯಿತು.
109 ರನ್ಗಳ ಸುಲಭ ಗುರಿ ಬೆನ್ನತ್ತಿದ ನ್ಯೂಝಿಲೆಂಡ್ ತಂಡಕ್ಕೆ ಲಾಕಿ ಫರ್ಗುಸನ್ ಆಘಾತ ನೀಡಿದರು. ಅದರಲ್ಲೂ ಪಂದ್ಯದ 6ನೇ ಓವರ್‌ನ ಅಂತಿಮ ಎಸೆತದಲ್ಲಿ ಕುಸಾಲ್ ಪೆರೇರಾ ವಿಕೆಟ್ ಕಬಳಿಸಿದ ಫರ್ಗುಸನ್ 8ನೇ ಓವರ್‌ನ ಮೊದಲೆರಡು ಎಸೆತಗಳಲ್ಲಿ ಕಮಿಂದು ಮೆಂಡಿಸ್ ಮತ್ತು ಚರಿತ್ ಅಸಲಂಕಾ ಅವರನ್ನು ಔಟ್ ಮಾಡಿದರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದರು.
ಇದರೊಂದಿಗೆ ಟಿ20 ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ನ್ಯೂಝಿಲೆಂಡ್ ತಂಡದ 5ನೇ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ ಜೇಕಬ್ ಓರಮ್ (2009), ಟಿಮ್ ಸೌಥಿ (2010, 2022), ಮೈಕೆಲ್ ಬ್ರೇಸ್ವೆಲ್ (2022) ಮತ್ತು ಮ್ಯಾಟ್ ಹೆನ್ರಿ (2023) ಈ ಸಾಧನೆ ಮಾಡಿದ್ದರು.
ಇನ್ನು ಲಾಕಿ ಫರ್ಗುಸನ್ ಅವರ ಈ ಹ್ಯಾಟ್ರಿಕ್ ವಿಕೆಟ್ನ ಸಾಧನೆಯೊಂದಿಗೆ ನ್ಯೂಝಿಲೆಂಡ್ ತಂಡವು ಶ್ರೀಲಂಕಾ ತಂಡವನ್ನು 19.5 ಓವರ್ಗಳಲ್ಲಿ 103 ರನ್ಗಳಿಗೆ ಆಲೌಟ್ ಮಾಡಿತು. ಈ ಮೂಲಕ ಕಿವೀಸ್ ಪಡೆ 5 ರನ್ಗಳ ರೋಚಕ ಜಯ ಸಾಧಿಸಿದೆ.