
ಆತಿಥೇಯ ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವೆ 2025 ರ ಮಹಿಳಾ ಏಕದಿನ ವಿಶ್ವಕಪ್ನ 10ನೇ ಪಂದ್ಯ ವಿಶಾಖಪಟ್ಟಣಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಕ್ಕಿದೆ. ಸ್ಮೃತಿ ಮಂಧಾನ ಹಾಗೂ ಪ್ರತಿಕಾ ರಾವಲ್ ಮೊದಲ ವಿಕೆಟ್ಗೆ 55 ರನ್ಗಳ ಜೊತೆಯಾಟ ನೀಡಿದರು.

ಆದಾಗ್ಯೂ ವಿಶ್ವಕಪ್‌ನಲ್ಲಿ ಕಳಪೆ ಫಾರ್ಮ್ನಿಂದ ಬಳುತ್ತಿರುವ ಉಪನಾಯಕಿ ಸ್ಮೃತಿ ಮಂಧಾನ ಸತತ ಮೂರನೇ ಪಂದ್ಯದಲ್ಲೂ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿದ್ದಾರೆ. ಈ ಪಂದ್ಯದಲ್ಲಿ ಉತ್ತಮ ಆರಂಭ ಪಡೆದುಕೊಂಡಿದ್ದ ಮಂಧಾನ ಮತ್ತೊಮ್ಮೆ ವಿಕೆಟ್ ಕೈಚೆಲ್ಲಿದ್ದಾರೆ. ತಮ್ಮ ಇನ್ನಿಂಗ್ಸ್ನಲ್ಲಿ 32 ಎಸೆತಗಳನ್ನು ಎದುರಿಸಿದ ಸ್ಮೃತಿ 1 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 23 ರನ್ ಗಳಿಸಿ ಔಟಾದರು.

ಮೊದಲೆರಡು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಮಂಧಾನ ಅವರಿಂದ ಇಂದಿನ ಪಂದ್ಯದಲ್ಲಿ ಬಿಗ್ ಇನ್ನಿಂಗ್ಸ್ ನಿರೀಕ್ಷಿಸಲಾಗಿತ್ತು. ಆದರೆ ಮಂಧಾನಗೆ ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಆದಾಗ್ಯೂ ಈ ಪಂದ್ಯದಲ್ಲಿ 23 ರನ್ ಕಲೆಹಾಕುವ ಮೂಲಕ ಮಂಧಾನ ಬರೋಬ್ಬರಿ 28 ವರ್ಷಗಳ ಹಿಂದಿನ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಆಫ್ರಿಕಾ ವಿರುದ್ಧ 23 ರನ್ಗಳ ಇನ್ನಿಂಗ್ಸ್ ಆಡಿದ ಸ್ಮೃತಿ ಈ ಮೂಲಕ ಮಹಿಳಾ ಏಕದಿನ ಕ್ರಿಕೆಟ್ನ ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ರನ್ ಕಲೆಹಾಕಿದ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಸ್ಮೃತಿ ಮಂಧಾನ ಅವರಿಗಿಂತ ಮೊದಲು, ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ ಬೆಲಿಂಡಾ ಕ್ಲಾರ್ಕ್ ಅವರ ಹೆಸರಿನಲ್ಲಿತ್ತು, ಅವರು 1997 ರಲ್ಲಿ ಏಕದಿನ ಪಂದ್ಯಗಳಲ್ಲಿ 970 ರನ್ ಗಳಿಸಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸ್ಮೃತಿ 12 ರನ್ ಕಲೆಹಾಕುವ ಮೂಲಕ 2025 ರಲ್ಲಿ ಏಕದಿನ ಸ್ವರೂಪದಲ್ಲಿ ಒಟ್ಟು 982 ರನ್‌ಗಳನ್ನು ಗಳಿಸಿದ್ದಾರೆ. ಈ ಮೂಲಕ ಬೆಲಿಂಡಾ ಕ್ಲಾರ್ಕ್ ಅವರ 970 ರನ್ಗಳ ದಾಖಲೆಯನ್ನು ಸ್ಮೃತಿ ಮುರಿದಿದ್ದಾರೆ. ಮುಂದಿನ ಪಂದ್ಯದಲ್ಲಿ ಮಂಧಾನ ಇನ್ನೂ 18 ರನ್ ಗಳಿಸಿದರೆ, ಮಹಿಳಾ ಏಕದಿನ ಪಂದ್ಯಗಳಲ್ಲಿ ಕ್ಯಾಲೆಂಡರ್ ವರ್ಷದಲ್ಲಿ 1,000 ರನ್ ತಲುಪಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.

ಮಹಿಳಾ ಏಕದಿನ ವಿಶ್ವಕಪ್‌ಗೆ ಮುನ್ನ ಸ್ಮೃತಿ ಮಂಧಾನ ಈ ಮಾದರಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು, ಆದರೆ ಮೆಗಾ ಈವೆಂಟ್‌ನ ಇದುವರೆಗಿನ ಮೂರು ಇನ್ನಿಂಗ್ಸ್‌ಗಳಲ್ಲಿ ಮಂಧಾನ ಗಮನಾರ್ಹವಾದದ್ದನ್ನು ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಈ ವಿಶ್ವಕಪ್‌ನಲ್ಲಿ ಮಂಧಾನ 18 ರ ಸರಾಸರಿಯಲ್ಲಿ ಕೇವಲ 54 ರನ್‌ಗಳನ್ನು ಗಳಿಸಿದ್ದಾರೆ. ವಿಶ್ವಕಪ್‌ಗೆ ಮುನ್ನ, ಮಂಧಾನ 14 ಇನ್ನಿಂಗ್ಸ್‌ಗಳಲ್ಲಿ ಸುಮಾರು 66 ರ ಸರಾಸರಿಯಲ್ಲಿ 928 ರನ್‌ಗಳನ್ನು ಗಳಿಸಿದ್ದರು.