Updated on: Dec 13, 2021 | 3:57 PM
ಟೀಮ್ ಇಂಡಿಯಾ ನಾಯಕತ್ವ ಬದಲಾಗಿದೆ. ಟಿ20 ಹಾಗೂ ಏಕದಿನ ತಂಡದ ನಾಯಕನಾಗಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಈ ಹಿಂದಿನಂತೆ ಟೆಸ್ಟ್ ತಂಡದ ನಾಯಕನಾಗಿ ವಿರಾಟ್ ಕೊಹ್ಲಿ ಮುಂದುವರೆಯಲಿದ್ದಾರೆ. ಆದರೆ ಉತ್ತಮ ಗೆಲುವಿನ ಸರಾಸರಿ ಹೊಂದಿದ್ದರೂ, ಕೊಹ್ಲಿಯನ್ನು ಸೀಮಿತ ಓವರ್‌ಗಳ ನಾಯಕತ್ವದಿಂದ ಕೆಳಗಿಸಲಾಗಿದೆ. ಇದಕ್ಕೆ ಒಂದು ಕಾರಣ ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ ಭಾರತ ತಂಡವು ಐಸಿಸಿ ಟ್ರೋಫಿ ಗೆಲ್ಲದಿರುವುದು. ಅಂದರೆ 2013 ರ ಬಳಿಕ ಭಾರತ ತಂಡವು ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಆದರೆ ಶೀಘ್ರದಲ್ಲೇ ಟೀಮ್ ಇಂಡಿಯಾ ಐಸಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲಿದೆ ಎಂದಿದ್ದಾರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ.
ಈ ಬಗ್ಗೆ ಮಾತನಾಡಿರುವ ಗಂಗೂಲಿ, ಟೀಮ್ ಇಂಡಿಯಾ ಶೀಘ್ರದಲ್ಲೇ ಐಸಿಸಿ ಪ್ರಶಸ್ತಿಯನ್ನು ಗೆಲ್ಲುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. 2013ರಿಂದ ಕಾಡುತ್ತಿರುವ ಈ ಪ್ರಶಸ್ತಿ ಬರಗಾಲ ಶೀಘ್ರವೇ ಕೊನೆಗೊಳ್ಳಲಿದೆ. 2022 ಮತ್ತು 2031 ರ ನಡುವೆ ನಡೆಯಲಿರುವ ಐಸಿಸಿ ಟೂರ್ನಿಗಳಲ್ಲಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಲಿದೆ ಎಂದು ಗಂಗೂಲಿ ಭವಿಷ್ಯ ನುಡಿದಿದ್ದಾರೆ.
ಭಾರತ ಕೊನೆಯ ಬಾರಿಗೆ 2013 ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತು. ಎಂಎಸ್ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಈ ಪ್ರಶಸ್ತಿಯನ್ನು ಜಯಿಸಿತ್ತು. ಆದರೆ, ಇದರ ನಂತರ ಟೀಂ ಇಂಡಿಯಾ 2014ರ ಟಿ20 ವಿಶ್ವಕಪ್, 2015ರ ಏಕದಿನ ವಿಶ್ವಕಪ್, 2016ರ ಟಿ20 ವಿಶ್ವಕಪ್, 2017ರ ಚಾಂಪಿಯನ್ಸ್ ಟ್ರೋಫಿ, 2019ರ ಏಕದಿನ ವಿಶ್ವಕಪ್, 2021ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ.
ಇದೀಗ ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದ್ದು, ಅದರಂತೆ ಮುಂಬರುವ ಸೀಮಿತ ಓವರ್‌ಗಳ ಐಸಿಸಿ ಟೂರ್ನಿಯಲ್ಲಿ ಟೀಮ್ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಇನ್ನು ತಂಡದ ಕೋಚ್ ಆಗಿ ರಾಹುಲ್ ದ್ರಾವಿಡ್ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಕಾರಣದಿಂದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಶೀಘ್ರದಲ್ಲೇ ಭಾರತ ತಂಡವು ಐಸಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂದಿನ 9 ವರ್ಷಗಳಲ್ಲಿ ಪ್ರಶಸ್ತಿ ಗೆಲ್ಲುವ ಅವಕಾಶವಿದೆ. ಅದರಲ್ಲೂ 2022 ರಲ್ಲೇ ಟಿ20 ವಿಶ್ವಕಪ್ ನಡೆಯಲಿದೆ. ಹಾಗೆಯೇ 2023 ರಲ್ಲಿ ಭಾರತದಲ್ಲೇ ಏಕದಿನ ವಿಶ್ವಕಪ್ ಕೂಡ ಜರುಗಲಿದೆ. ಇದಲ್ಲದೆ 2031 ರವರೆಗೆ ಪ್ರತಿ ವರ್ಷ ಐಸಿಸಿ ಟೂರ್ನಿಗಳು ನಡೆಯಲಿದೆ. ಇದರಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸವಿದೆ ಎಂದು ಗಂಗೂಲಿ ತಿಳಿಸಿದ್ದಾರೆ. 2019ರ ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಸೋಲು ಮತ್ತು 2021ರ ಟಿ20 ವಿಶ್ವಕಪ್‌ನಲ್ಲಿ ಲೀಗ್ ಹಂತದಲ್ಲೇ ಟೀಮ್ ಇಂಡಿಯಾ ಹೊರಬಿದ್ದಿತ್ತು. ಇದೀಗ ನಾನು ಕೂಡ ಐಸಿಸಿ ಟೂರ್ನಿ ಗೆಲ್ಲುವುದನ್ನು ಎದುರು ನೋಡುತ್ತಿದ್ದೇನೆ ಎಂದು ಗಂಗೂಲಿ ತಿಳಿಸಿದ್ದಾರೆ.
ಭವಿಷ್ಯ ಹೇಳುವುದು ಕಷ್ಟವಾದರೂ, ರಾಹುಲ್ ದ್ರಾವಿಡ್ ಅವರಂತಹ ಕೋಚ್ ಮತ್ತು ರೋಹಿತ್ ಶರ್ಮಾ ಅವರಂತಹ ಸೀಮಿತ ಓವರ್‌ಗಳ ನಾಯಕ ತಂಡದಲ್ಲಿದ್ದಾರೆ. ಕ್ರಿಕೆಟ್ ಒಂದು ತಂಡದ ಆಟವಾಗಿದ್ದು, ಇದರಲ್ಲಿ ಕೋಚ್ ಮತ್ತು ಕ್ಯಾಪ್ಟನ್ ಜೊತೆಗೆ ಉಳಿದ ಆಟಗಾರರು ಒಟ್ಟಾಗಿ ಪ್ರದರ್ಶನ ನೀಡಬೇಕು. ಹೀಗಾದರೆ ಮಾತ್ರ ತಂಡಕ್ಕೆ ಯಶಸ್ಸು ಸಿಗುತ್ತದೆ. ಪ್ರಸ್ತುತ ತಂಡವು ಅತ್ಯುತ್ತಮವಾಗಿದ್ದು, ಹೀಗಾಗಿ ಮುಂಬರುವ ದಿನಗಳಲ್ಲಿ ಟೀಮ್ ಇಂಡಿಯಾ ಐಸಿಸಿ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಲಿದೆ ಎಂದು ಸೌರವ್ ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.