Updated on: Jun 12, 2023 | 11:23 PM
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (WTC Final 2023) ಪಂದ್ಯದಲ್ಲಿನ ಹೀನಾಯ ಸೋಲಿನ ಬೆನ್ನಲ್ಲೇ ರೋಹಿತ್ ಶರ್ಮಾ (Rohit Sharma) ಅವರ ನಾಯಕತ್ವದ ಬಗ್ಗೆ ಟೀಕೆಗಳು ಕೇಳಿ ಬರುತ್ತಿವೆ. ಇದರ ನಡುವೆ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಹಿಟ್ಮ್ಯಾನ್ ಅವರ ನಾಯಕತ್ವವನ್ನು ಹಾಡಿ ಹೊಗಳಿರುವುದು ವಿಶೇಷ.
ಖಾಸಗಿ ಚಾನೆಲ್ನ ಸಂದರ್ಶನವೊಂದರಲ್ಲಿ ಮಾತನಾಡಿದ ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವ ತ್ಯಜಿಸಿದಾಗ ನಮ್ಮ ಮುಂದಿದ್ದ ಅತ್ಯುತ್ತಮ ಆಯ್ಕೆ ರೋಹಿತ್ ಶರ್ಮಾ ಮಾತ್ರ. ಹೀಗಾಗಿ ಹಿಟ್ಮ್ಯಾನ್ನನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು.
ಈಗಲೂ ರೋಹಿತ್ ಶರ್ಮಾ ಉತ್ತಮ ನಾಯಕ. ಅವರ ಮೇಲೆ ನನಗೆ ಅಪಾರ ನಂಬಿಕೆ ಇದೆ. ಏಕೆಂದರೆ ಅವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದಿದೆ. ಇದು ಒಬ್ಬ ನಾಯಕ ವಿಚಾರದಲ್ಲಿ ದೊಡ್ಡ ವಿಷಯ ಎಂದು ಗಂಗೂಲಿ ಹೇಳಿದರು.
ಇಂತಹ ಸ್ಪರ್ಧಾತ್ಮಕ ಟೂರ್ನಿಯಲ್ಲಿ ರೋಹಿತ್ ಶರ್ಮಾ 5 ಬಾರಿ ಮುಂಬೈ ಇಂಡಿಯನ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಹೀಗಾಗಿಯೇ ಟೀಮ್ ಇಂಡಿಯಾಗೆ ನಾಯಕನಾಗಿ ರೋಹಿತ್ ಇನ್ನೂ ಸಹ ಅತ್ಯುತ್ತಮ ಆಯ್ಕೆ ಎಂದು ನಾನು ನಂಬುತ್ತೇನೆ ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ.
ಇದೇ ವೇಳೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಸೋಲಿನ ಬಗ್ಗೆ ಮಾತನಾಡಿದ ಗಂಗೂಲಿ, ನಾವೆಲ್ಲರೂ ಭಾರತ ಗೆಲ್ಲುತ್ತದೆ ಎಂದು ಭಾವಿಸಿದ್ದೆವು. ಏಕೆಂದರೆ ಈ ಹಿಂದೆ ಭಾರತ ತಂಡ ಇಂಗ್ಲೆಂಡ್‌ನಲ್ಲಿ ಗೆದ್ದಿದೆ. ನಾನು ಬಿಸಿಸಿಐ ಅಧ್ಯಕ್ಷನಾಗಿದ್ದಾಗ ಆಸ್ಟ್ರೇಲಿಯಾ ವಿರುದ್ಧ ಅವರದ್ದೇ ನಾಡಿನಲ್ಲಿ ಐತಿಹಾಸಿಕ ಸರಣಿ ಗೆದ್ದಿದ್ದೆವು. ಹೀಗಾಗಿಯೇ ನನಗೆ ಟೀಮ್ ಇಂಡಿಯಾ ಗೆಲ್ಲಲಿದೆ ಎಂಬ ನಿರೀಕ್ಷೆಯಿತ್ತು.
ಆದರೆ ಮೊದಲ ದಿನದ ಭೋಜನ ಮತ್ತು ಚಹಾ ಅವಧಿಯ ನಡುವಿನ ಸಮಯದಲ್ಲಿ ಭಾರತ ತಂಡವು ತೀರಾ ಹಿಂದುಳಿದಿತ್ತು. ಅಲ್ಲದೆ ಈ ಪಂದ್ಯದಲ್ಲಿ ಭಾರತ ಯಾವುದೇ ರಿಸ್ಕ್ ತೆಗೆದುಕೊಳ್ಳಲಿಲ್ಲ ಎಂಬುದು ನನ್ನ ಅನಿಸಿಕೆ. ನಾಲ್ಕನೇ ಇನ್ನಿಂಗ್ಸ್‌ನಲ್ಲಿ 250-300 ರನ್‌ಗಳ ಟಾರ್ಗೆಟ್ ಮಾಡಬಲ್ಲೆವು ಎಂಬುದಷ್ಟೇ ಅವರ ಮನಸ್ಸಿನಲ್ಲಿತ್ತು. ಆದರೆ ಭಾರತ ತಂಡಕ್ಕೆ ಗೆಲ್ಲುವ ಸಾಮರ್ಥ್ಯವಿದ್ದರೂ ಅದು ಸಾಧ್ಯವಾಗಿಲ್ಲ.
ಪಂದ್ಯವನ್ನು ಗೆಲ್ಲಬೇಕಿದ್ದರೆ ಭಾರತ ಭಯವಿಲ್ಲದೆ ಕ್ರಿಕೆಟ್ ಆಡಬೇಕಾಗಿದೆ. ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ವಿಶ್ವಕಪ್‌ಗೂ ಮುನ್ನ ಈ ಬಗ್ಗೆ ಗಮನಹರಿಸಬೇಕು ಎಂಬುದು ನನ್ನ ಅಭಿಪ್ರಾಯ ಎಂದು ಸೌರವ್ ಗಂಗೂಲಿ ತಿಳಿಸಿದರು.