
ಈಗಾಗಲೇ ಎಲ್ಲಾ ತಂಡಗಳು 2026 ರ ಐಪಿಎಲ್ಗಾಗಿ ತಮ್ಮ ಸಿದ್ಧತೆಗಳನ್ನು ಪ್ರಾರಂಭಿಸಿವೆ. ಆ ಪ್ರಕಾರ ಇತ್ತೀಚೆಗೆ, ಕೆಲವು ತಂಡಗಳು ಗಮನಾರ್ಹ ಬದಲಾವಣೆಗಳನ್ನು ಮಾಡಿವೆ. ಈಗ, ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರ ತಂಡ ಪಂಜಾಬ್ ಕಿಂಗ್ಸ್‌ನಿಂದ ಮಹತ್ವದ ಸುದ್ದಿ ಹೊರಬಿದ್ದಿದೆ. ತಂಡದ ಕೋಚಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕನ್ನಡಿಗ ಸುನಿಲ್ ಜೋಶಿ ಇದೀಗ ತಂಡವನ್ನು ತೊರೆದಿದ್ದಾರೆ.

ಭಾರತದ ಮಾಜಿ ಸ್ಪಿನ್ ಬೌಲರ್ ಸುನಿಲ್ ಜೋಶಿ ಪಂಜಾಬ್ ಕಿಂಗ್ಸ್ ತಂಡದೊಂದಿಗಿನ ತಮ್ಮ ಕೆಲಸಕ್ಕೆ ವಿದಾಯ ಹೇಳಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದಲ್ಲಿ ಸ್ಪಿನ್ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಜೋಶಿ ಇದೀಗ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮೂಲಗಳ ಪ್ರಕಾರ, ಜೋಶಿ ಈಗ ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ಗೆ ಸೇರುತ್ತಿದ್ದು, ಇದಕ್ಕಾಗಿ ಅವರು ಪಂಜಾಬ್ ಕಿಂಗ್ಸ್ ತೊರೆದಿದ್ದಾರೆ ಎನ್ನಲಾಗುತ್ತಿದೆ.

ಕ್ರಿಕ್‌ಬಜ್ ವರದಿಯ ಪ್ರಕಾರ, ಸುನಿಲ್ ಜೋಶಿ ತಂಡವನ್ನು ತೊರೆಯುತ್ತಿರುವ ಬಗ್ಗೆ ಪತ್ರ ಬರೆದಿದ್ದಾರೆ ಎಂದು ಫ್ರಾಂಚೈಸಿ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಅಲ್ಲದೆ ಅವರು ತಮ್ಮ ನಿರ್ಧಾರವನ್ನು ವೈಯಕ್ತಿಕವಾಗಿ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಅವರಿಗೆ ತಿಳಿಸಿದ್ದಾರೆ ಎಂತಲೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜೋಶಿ ಈ ಹಿಂದೆ ಪಂಜಾಬ್ ಕಿಂಗ್ಸ್‌ನೊಂದಿಗೆ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರ ಅಡಿಯಲ್ಲಿ (2020-22ರ ನಡುವೆ) ಕೆಲಸ ಮಾಡಿದ್ದಾರೆ. ಹಾಗೆಯೇ ಅವರು ಸ್ವಲ್ಪ ಸಮಯದವರೆಗೆ ಉತ್ತರ ಪ್ರದೇಶ ರಾಜ್ಯ ತಂಡದ ಮುಖ್ಯ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಇದು ಮಾತ್ರವಲ್ಲದೆ ಟೀಂ ಇಂಡಿಯಾದ ಮುಖ್ಯ ಆಯ್ಕೆದಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಇದೀಗ ಪಂಜಾಬ್ ಕಿಂಗ್ಸ್ ತಂಡವನ್ನು ತೊರೆದಿರುವ ಸುನಿಲ್ ಜೋಶಿ ಅವರು ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ಗೆ ಸೇರಲಿದ್ದು, ಅವರು ಯುವ ಆಟಗಾರರ ಅಭಿವೃದ್ಧಿ ಮತ್ತು ತರಬೇತಿಯ ಮೇಲೆ ಗಮನಹರಿಸಲಿದ್ದಾರೆ. ಆದಾಗ್ಯೂ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸುನಿಲ್ ಜೋಶಿ 1996 ಮತ್ತು 2001 ರ ನಡುವೆ ಭಾರತ ಪರ 15 ಟೆಸ್ಟ್ ಮತ್ತು 69 ಏಕದಿನ ಪಂದ್ಯಗಳನ್ನು ಆಡಿದ್ದು , ಒಟ್ಟು 110 ವಿಕೆಟ್‌ಗಳನ್ನು ಕಬಳಿಸಿದ್ದಾರೆ.