Updated on: Mar 21, 2022 | 8:09 PM
ಐಪಿಎಲ್ ಸೀಸನ್ 15 ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಮಾರ್ಚ್ 26 ರಿಂದ ಶುರುವಾಗಲಿರುವ ಐಪಿಎಲ್ನಲ್ಲಿ ಈ ಬಾರಿ ಕೂಡ ಒಂದಷ್ಟು ದಾಖಲೆಗಳು ನಿರ್ಮಾಣವಾಗಲಿದೆ. ಅದರಲ್ಲೂ ಸ್ಪೋಟಕ ಬ್ಯಾಟಿಂಗ್ ಮೂಲಕ ಐಪಿಎಲ್ನಲ್ಲಿ ದಾಖಲೆ ಬರೆದಿಟ್ಟಿರುವ ಕ್ರಿಸ್ ಗೇಲ್ ದಾಖಲೆ ಮೇಲೆ ವಿರಾಟ್ ಕೊಹ್ಲಿ ಕಣ್ಣಿದೆ.
ಏಕೆಂದರೆ ಕಿಂಗ್ ಕೊಹ್ಲಿ ಬ್ಯಾಟ್ನಿಂದ ಶತಕ ಸಿಡಿದು ವರ್ಷಗಳೇ ಕಳೆದಿವೆ. ಇತ್ತ ಶತಕಗಳ ಮೂಲಕ ಕ್ರಿಸ್ ಗೇಲ್ ಐಪಿಎಲ್ನಲ್ಲಿ ದಾಖಲೆ ಬರೆದಿದ್ದಾರೆ. ಆದರೆ ಈ ದಾಖಲೆಯನ್ನು ಮುರಿಯಲು ಕೊಹ್ಲಿಗೆ ಬೇಕಿರುವುದು ಕೇವಲ 1 ಶತಕ ಎಂಬುದು ವಿಶೇಷ. ಅಂದರೆ ಐಪಿಎಲ್ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ದಾಖಲೆಯನ್ನು ಸರಿಗಟ್ಟಲು ವಿರಾಟ್ ಕೊಹ್ಲಿಗೆ ಒಂದು ಶತಕದ ಅವಶ್ಯಕತೆಯಿದೆ. ಈ ಬಾರಿಯ ಐಪಿಎಲ್ನಲ್ಲಿ ಕ್ರಿಸ್ ಗೇಲ್ ಇಲ್ಲದಿರುವುದರಿಂದ ವಿರಾಟ್ ಕೊಹ್ಲಿ 2 ಶತಕ ಸಿಡಿಸಿದ್ರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಹಾಗಿದ್ರೆ ಐಪಿಎಲ್ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ಟಾಪ್-5 ಬ್ಯಾಟ್ಸ್ಮನ್ಗಳು ಯಾರೆಲ್ಲಾ ನೋಡೋಣ...
5- ಎಬಿ ಡಿವಿಲಿಯರ್ಸ್: ಐಪಿಎಲ್ನಲ್ಲಿ 170 ಇನಿಂಗ್ಸ್ ಆಡಿರುವ ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ಇದುವರೆಗೆ 3 ಶತಕ ಬಾರಿಸಿದ್ದಾರೆ.
4- ಶೇನ್ ವಾಟ್ಸನ್: ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಐಪಿಎಲ್ನಲ್ಲಿ 141 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 4 ಶತಕ ಬಾರಿಸುವ ಮೂಲಕ ಮಿಂಚಿದ್ದರು.
3- ಡೇವಿಡ್ ವಾರ್ನರ್: ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಐಪಿಎಲ್ನಲ್ಲಿ 150 ಇನಿಂಗ್ಸ್ ಆಡಿದ್ದು, ಈ ವೇಳೆ 4 ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.
2- ವಿರಾಟ್ ಕೊಹ್ಲಿ: ಕಿಂಗ್ ಕೊಹ್ಲಿ ಐಪಿಎಲ್ನಲ್ಲಿ 199 ಇನಿಂಗ್ಸ್ ಆಡಿದ್ದಾರೆ. ಈ ವೇಳೆ ಬರೋಬ್ಬರಿ 5 ಶತಕ ಬಾರಿಸುವ ಮೂಲಕ ಐಪಿಎಲ್ನಲ್ಲಿ ಅತೀ ಹೆಚ್ಚು ಸೆಂಚುರಿ ಸಿಡಿಸಿದ ಭಾರತೀಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
1- ಕ್ರಿಸ್ ಗೇಲ್: ಯುನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಐಪಿಎಲ್ನಲ್ಲಿ 141 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 6 ಭರ್ಜರಿ ಶತಕ ಸಿಡಿಸಿ ಐಪಿಎಲ್ನಲ್ಲಿ ಅತೀ ಹೆಚ್ಚು ಸೆಂಚುರಿ ಬಾರಿಸಿದ ದಾಖಲೆ ನಿರ್ಮಿಸಿದ್ದಾರೆ.
ಈ ದಾಖಲೆಯನ್ನು ಮುರಿಯಲು ವಿರಾಟ್ ಕೊಹ್ಲಿಗೆ 2 ಶತಕಗಳ ಅವಶ್ಯಕತೆಯಿದೆ. ಹಾಗೆಯೇ ಒಂದು ಶತಕ ಮೂಡಿಬಂದರೆ ಗೇಲ್ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಕ್ರಿಸ್ ಗೇಲ್ ಅವರ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಲಿದ್ದಾರಾ ಕಾದು ನೋಡಬೇಕಿದೆ.