
ಟೀಮ್ ಇಂಡಿಯಾದ ಹೊಡಿಬಡಿ ದಾಂಡಿಗ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಅದು ಕೂಡ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಎಂಬುದು ವಿಶೇಷ.

2022 ರಲ್ಲಿ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಆಟಗಾರನಾಗಿ ಸೂರ್ಯಕುಮಾರ್ ಯಾದವ್ ಹೊರಹೊಮ್ಮಿದ್ದಾರೆ. ಈ ವರ್ಷ 31 ಪಂದ್ಯಗಳನ್ನಾಡಿರುವ ಸೂರ್ಯ ಒಟ್ಟು 1164 ರನ್ ಕಲೆಹಾಕಿದ್ದಾರೆ. ಈ ಮೂಲಕ 2022 ರಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.

ಈ ಪಟ್ಟಿಯಲ್ಲಿ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ 2ನೇ ಸ್ಥಾನದಲ್ಲಿದ್ದಾರೆ. ಆದರೆ ಪಾಕ್ ತಂಡವು ಈ ವರ್ಷಾಂತ್ಯದಲ್ಲಿ ಯಾವುದೇ ಟಿ20 ಪಂದ್ಯವನ್ನು ಆಡುತ್ತಿಲ್ಲ. ಹೀಗಾಗಿ 25 ಪಂದ್ಯಗಳಿಂದ 996 ರನ್ ಕಲೆಹಾಕಿರುವ ರಿಜ್ವಾನ್ 2ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.

ಅಷ್ಟೇ ಅಲ್ಲದೆ ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಬೌಂಡರಿ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನೂ ಕೂಡ ಸೂರ್ಯ ತಮ್ಮದಾಗಿಸಿಕೊಂಡಿದ್ದಾರೆ. ಈ ವರ್ಷ 31 ಇನಿಂಗ್ಸ್ ಆಡಿರುವ ಸೂರ್ಯಕುಮಾರ್ ಯಾದವ್, ಒಟ್ಟು 106 ಫೋರ್ ಹಾಗೂ 68 ಸಿಕ್ಸ್ ಸಿಡಿಸುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದಾರೆ.

ಇದರ ಜೊತೆಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಂದು ವರ್ಷದೊಳಗೆ 1000 ರನ್ ಪೂರೈಸಿದ ಮೊದಲ ಭಾರತೀಯ ಆಟಗಾರನಾಗಿ ಸೂರ್ಯಕುಮಾರ್ ಹೊರಹೊಮ್ಮಿದ್ದಾರೆ. ಅಷ್ಟೇ ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ 2ನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಇದಕ್ಕೂ ಮುನ್ನ 2021 ರಲ್ಲಿ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಕೇವಲ 26 ಇನಿಂಗ್ಸ್ ಮೂಲಕ 1326 ರನ್ ಬಾರಿಸಿ ವಿಶ್ವ ದಾಖಲೆ ಬರೆದಿದ್ದರು. ಇದೀಗ 1164 ರನ್ ಬಾರಿಸಿರುವ ಸೂರ್ಯಕುಮಾರ್ಗೆ ಈ ದಾಖಲೆ ಮುರಿಯಲು ಸಾಧ್ಯವಾಗುವುದಿಲ್ಲ.

ಏಕೆಂದರೆ ಈ ವರ್ಷದ ಟೀಮ್ ಇಂಡಿಯಾದ ಟಿ20 ವೇಳಾಪಟ್ಟಿ ಮುಗಿದಿದ್ದು, ಇನ್ನುಳಿದಿರುವುದು ಏಕದಿನ ಹಾಗೂ ಟೆಸ್ಟ್ ಸರಣಿಗಳು ಮಾತ್ರ. ಹೀಗಾಗಿ ರಿಜ್ವಾನ್ ಹೆಸರಿನಲ್ಲಿರುವ ವಿಶ್ವ ದಾಖಲೆ ಮುರಿಯುವ ಅವಕಾಶ ಸೂರ್ಯಕುಮಾರ್ ಯಾದವ್ ಕೈತಪ್ಪಿದೆ.

ಒಟ್ಟಿನಲ್ಲಿ 2022 ರಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ 9 ಅರ್ಧಶತಕ ಹಾಗೂ 2 ಶತಕದೊಂದಿಗೆ 1164 ರನ್ ಕಲೆಹಾಕಿ ಸೂರ್ಯಕುಮಾರ್ ಯಾದವ್ ರನ್ ಮೆಷಿನ್ ಆಗಿ ಹೊರಹೊಮ್ಮಿರುವುದು ವಿಶೇಷ.