ಭಾರತ ಟಿ20 ತಂಡದ ನೂತನ ನಾಯಕ ಸೂರ್ಯಕುಮಾರ್ ಯಾದವ್?
Suryakumar Yadav: ಸೂರ್ಯಕುಮಾರ್ ಯಾದವ್ 7 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಅದು ಕೂಡ ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಎಂಬುದು ವಿಶೇಷ. ಈ ಎರಡು ಸರಣಿಗಳಲ್ಲೂ ಟೀಮ್ ಇಂಡಿಯಾ ಜಯ ಸಾಧಿಸಿದೆ. ಅಲ್ಲದೆ ಈ ಸರಣಿಯ 7 ಪಂದ್ಯಗಳಲ್ಲಿ 5 ರಲ್ಲಿ ಭಾರತ ತಂಡ ಜಯಭೇರಿ ಬಾರಿಸಿತ್ತು. ಹೀಗಾಗಿ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕನ ಸ್ಥಾನಕ್ಕೆ ಪರಿಗಣಿಸಲಾಗಿದೆ.
1 / 5
ಭಾರತ ಟಿ20 ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ (Suryakumar Yadav) ಆಯ್ಕೆಯಾಗಿದ್ದಾರೆ ಎಂದು ಕ್ರಿಕ್ಇನ್ಫೋ ವರದಿ ಮಾಡಿದೆ. ಈ ಹಿಂದೆ ಹಾರ್ದಿಕ್ ಪಾಂಡ್ಯ ಟಿ20 ತಂಡದ ಕ್ಯಾಪ್ಟನ್ ಆಗಲಿದ್ದಾರೆ ಎನ್ನಲಾಗಿತ್ತು. ಆದರೀಗ ಟಿ20 ಸ್ಪೆಷಲಿಸ್ಟ್ ಸೂರ್ಯಕುಮಾರ್ ಯಾದವ್ಗೆ ನಾಯಕನ ಪಟ್ಟ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ. ಅದರಂತೆ ಶ್ರೀಲಂಕಾ ವಿರುದ್ಧದ ಸರಣಿಯೊಂದಿಗೆ ಸೂರ್ಯ ಭಾರತ ಟಿ20 ತಂಡದ ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
2 / 5
ಸೂರ್ಯಕುಮಾರ್ ಯಾದವ್ ಇದಕ್ಕೂ ಮುನ್ನ ಭಾರತ ತಂಡವನ್ನು 7 ಟಿ20 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಪ್ರಮುಖ ಆಟಗಾರರ ಅನುಪಸ್ಥಿತಿಯ ನಡುವೆ ಟೀಮ್ ಇಂಡಿಯಾದ ಸಾರಥ್ಯವಹಿಸಿದ್ದ ಸೂರ್ಯ 5 ಪಂದ್ಯಗಳಲ್ಲಿ ಭಾರತ ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ. ಇದೀಗ ಜುಲೈ 27 ರಿಂದ ಶುರುವಾಗಲಿರುವ ಟಿ20 ಸರಣಿ ಮೂಲಕ ಪೂರ್ಣ ಪ್ರಮಾಣದ ನಾಯಕರಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
3 / 5
ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ರೋಹಿತ್ ಶರ್ಮಾ ವಿದಾಯ ಹೇಳಿದ್ದರು. ಹೀಗಾಗಿ ಟಿ20 ತಂಡಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಬಿಸಿಸಿಐ ಮುಂದಿತ್ತು. ಆದರಂತೆ ನಾಯಕರುಗಳ ರೇಸ್ನಲ್ಲಿ ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ಹೆಸರುಗಳು ಮುಂಚೂಣಿಯಲ್ಲಿದ್ದವು.
4 / 5
ಅದರಂತೆ ಇದೀಗ ಆಲ್ರೌಂಡರ್ ಹಾರ್ದಿಕ್ ಪಾಂಡ್ಯರನ್ನು ಹಿಂದಿಕ್ಕಿ ಭಾರತ ತಂಡದ ನಾಯಕತ್ವ ಪಡೆಯುವಲ್ಲಿ ಸೂರ್ಯಕುಮಾರ್ ಯಾದವ್ ಯಶಸ್ವಿಯಾಗಿದ್ದಾರೆ ಎಂದು ಕ್ರಿಕ್ಇನ್ಫೋ ವರದಿ ಮಾಡಿದೆ. ಇದರೊಂದಿಗೆ ರೋಹಿತ್ ಶರ್ಮಾರ ಉತ್ತರಾಧಿಕಾರಿಯಾಗಿ ಸೂರ್ಯಕುಮಾರ್ ಕಾಣಿಸಿಕೊಳ್ಳುವುದು ಖಚಿತ ಎನ್ನಬಹುದು.
5 / 5
ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯರನ್ನು ನಾಯಕನನ್ನಾಗಿ ಆಯ್ಕೆ ಮಾಡಲು ಬಿಸಿಸಿಐ ಆಯ್ಕೆ ಸಮಿತಿ ಮುಂದಾಗಿತ್ತು. ಆದರೆ ಫಿಟ್ನೆಸ್ ಸಮಸ್ಯೆಯ ಕಾರಣ ಪ್ರತಿಯೊಂದು ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಲಭ್ಯತೆಯು ಅನಿಶ್ಚಿತತೆಯಾಗಿದೆ. ಹೀಗಾಗಿ ಖಾಯಂ ಸದಸ್ಯರೊಬ್ಬರಿಗೆ ನಾಯಕತ್ವ ನೀಡುವಂತೆ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ತಿಳಿಸಿದ್ದರು. ಅದರಂತೆ ಇದೀಗ ಸೂರ್ಯಕುಮಾರ್ ಯಾದವ್ಗೆ ನಾಯಕನ ಪಟ್ಟ ಒಲಿದಿದೆ ಎಂದು ತಿಳಿದು ಬಂದಿದೆ.
Published On - 11:04 am, Wed, 17 July 24