ಹಣ, ಅಂತಸ್ತು ಬಂದ್ಮೇಲೆ ಬದಲಾದ ವಿರಾಟ್ ಕೊಹ್ಲಿ: ಸಹ ಆಟಗಾರನಿಂದ ಅಚ್ಚರಿಯ ಹೇಳಿಕೆ
Amit Mishra - Virat Kohli: ಅಮಿತ್ ಮಿಶ್ರಾ ಟೀಮ್ ಇಂಡಿಯಾ ಪರ 22 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 76 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಹಾಗೆಯೇ 36 ಏಕದಿನ ಪಂದ್ಯಗಳಿಂದ 64 ವಿಕೆಟ್ ಕಬಳಿಸಿದ್ದಾರೆ. ಇನ್ನು 10 ಟಿ20 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದ ಮಿಶ್ರಾ 16 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಕುರಿತಾಗಿ ಅಚ್ಚರಿಯ ಹೇಳಿಕೆ ನೀಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
Updated on: Jul 17, 2024 | 7:36 AM

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಹಣ ಅಂತಸ್ತು ಬಂದ ಮೇಲೆ ಸಂಪೂರ್ಣ ಬದಲಾಗಿದ್ದಾರೆ. ಹೀಗಂದಿದ್ದು ಮತ್ಯಾರೂ ಅಲ್ಲ, ಕೊಹ್ಲಿಯ ಸಹ ಆಟಗಾರ ಅಮಿತ್ ಮಿಶ್ರಾ. ಪೋಡ್ ಕಾಸ್ಟ್ವೊಂದರಲ್ಲಿ ಮಾತನಾಡಿದ ಮಿಶ್ರಾ ನೇಮು-ಫೇಮು ಬಂದ್ಮೇಲೆ ಕೊಹ್ಲಿ ಬದಲಾಗಿದ್ದಾರೆ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ನನಗೆ ವಿರಾಟ್ ಕೊಹ್ಲಿ ಆರಂಭದಿಂದಲೂ ಗೊತ್ತು. ಆದರೆ ಅಂದು ಇದ್ದಂತಹ ಕೊಹ್ಲಿ ಈಗಿಲ್ಲ. ಹಣ ಅಂತಸ್ತು ಬಂದ ಮೇಲೆ ಅವರು ಸಂಪೂರ್ಣ ಬದಲಾಗಿದ್ದಾರೆ. ನಮ್ಮಿಬ್ಬರ ನಡುವೆ ಮಾತುಕತೆ ಕೂಡ ನಿಂತಿದೆ. ಮೊದಲಿದ್ದಂತೆ ಅವರು ಈಗಿಲ್ಲ. ಇದಕ್ಕೆಲ್ಲಾ ಕಾರಣ ನೇಮು-ಫೇಮು ಅಂದಿದ್ದಾರೆ.

ನಿಮಗೆಲ್ಲಾ ಗೊತ್ತಿರುವಂತೆ ನಾನು ವಿರಾಟ್ ಕೊಹ್ಲಿ ತುಂಬಾ ಆಪ್ತರಾಗಿದ್ದೆವು. ಆತನೊಂದಿಗೆ ನಾನು ಪಿಝ್ಝ, ಸಮೋಸಾ ಎಲ್ಲಾ ತಿಂದಿರುವೆ. ಆಗಿದ್ದ ಚೀಕುಗೂ (ಕೊಹ್ಲಿ) ಈಗಿನ ವಿರಾಟ್ ಕೊಹ್ಲಿಗೂ ತುಂಬಾ ವ್ಯತ್ಯಾಸವಿದೆ. ಇವೆಲ್ಲವೂ ಖ್ಯಾತಿ ಮತ್ತು ಅಧಿಕಾರ ಬಂದ್ಮೇಲೆ ಆದ ಬದಲಾವಣೆ ಎಂದು ಅಮಿತ್ ಮಿಶ್ರಾ ಹೇಳಿದ್ದಾರೆ.

ಇದಕ್ಕೂ ಮುನ್ನ ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಕೂಡ ಇದೇ ಮಾದರಿಯ ಹೇಳಿಕೆ ನೀಡಿದ್ದರು. ನಾನೀಗ ವಿರಾಟ್ ಕೊಹ್ಲಿ ಜೊತೆ ಸಂಪರ್ಕದಲ್ಲಿಲ್ಲ. ಚೀಕು ಮತ್ತು ವಿರಾಟ್ ಕೊಹ್ಲಿ ನಡುವೆ ತುಂಬಾ ವ್ಯತ್ಯಾಸವಿದೆ. ಅವರು ಬದಲಾಗಿದ್ದಾರೆ. ಹೀಗಾಗಿ ನಾನು ಅವರಿಗೆ ಕರೆ ಮಾಡಿ ತೊಂದರೆ ಕೊಡಲು ಬಯಸುವುದಿಲ್ಲ ಎಂದು ಯುವರಾಜ್ ಸಿಂಗ್ ಹೇಳಿದ್ದರು.

ಇದೀಗ ಅಮಿತ್ ಮಿಶ್ರಾ ಕೂಡ ಇದೇ ಮಾದರಿಯ ಹೇಳಿಕೆ ನೀಡಿದ್ದು, ಖ್ಯಾತಿ, ಅಧಿಕಾರ, ಹಣ ಅಂತಸ್ತು ಬಂದ ಮೇಲೆ ವಿರಾಟ್ ಕೊಹ್ಲಿ ಬದಲಾಗಿದ್ದಾರೆ ಎಂದಿದ್ದಾರೆ. ಈ ಹೇಳಿಕೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳು ಶುರುವಾಗಿದೆ.

ಅದರಲ್ಲೂ ಅಮಿತ್ ಮಿಶ್ರಾ ಅವರ ಈ ಹಿಂದಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಕಿಂಗ್ ಕೊಹ್ಲಿ ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ. ಅಲ್ಲದೆ ನಿಮ್ಮ ಅಂತಸ್ತು ಏನು ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.



















