
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಐದನೇ ಟಿ20 ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿತು. ಇದು ಸರಣಿಯ ಕೊನೆಯ ಪಂದ್ಯ ಹಾಗೂ ಸರಣಿ ನಿರ್ಧಾರಕ ಪಂದ್ಯವಾಗಿದ್ದರಿಂದ ಉಭಯ ತಂಡಗಳ ಮೇಲೆ ಸಾಕಷ್ಟು ಒತ್ತಡವಿತ್ತು. ಅದರಲ್ಲೂ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ಗೆ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಆದರೆ ಈ ಪಂದ್ಯದಲ್ಲೂ ಸೂರ್ಯ ಮಿಂಚಲಿಲ್ಲ.

ಎಲ್ಲರಿಗೂ ತಿಳಿದಿರುವಂತೆ ಸೂರ್ಯಕುಮಾರ್ ಯಾದವ್ ಭಾರತ ಟಿ20 ತಂಡದ ನಾಯಕನಾಗದೆ ಇದ್ದಿದ್ದರೆ ಅವರಿಗೆ ಯಾವತ್ತೋ ತಂಡದಿಂದ ಗೇಟ್ಪಾಸ್ ಸಿಕ್ಕಿರುತ್ತಿತ್ತು. ಆದರೆ ಆಟಗಾರನಾಗಿ ಸೂರ್ಯ ಯಶಸ್ವಿಯಾಗದಿದ್ದರೂ, ನಾಯಕನಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದೇ ಕಾರಣಕ್ಕಾಗಿ ಸೂರ್ಯ ತಂಡದಲ್ಲಿ ಉಳಿದುಕೊಂಡಿದ್ದಾರೆ.

ವಾಸ್ತವವಾಗಿ ಟೀಂ ಇಂಡಿಯಾ ಮುಂದಿನ ವರ್ಷ ಅಂದರೆ ಫೆಬ್ರವರಿ ತಿಂಗಳಲ್ಲಿ ಟಿ20 ವಿಶ್ವಕಪ್ನಲ್ಲಿ ಪಾಲ್ಗೊಳ್ಳಬೇಕಾಗಿದೆ. ಹೀಗಾಗಿ ತಂಡದ ಎಲ್ಲಾ ವಿಭಾಗವೂ ಉತ್ತಮ ಪ್ರದರ್ಶನ ನೀಡುವುದು ಅತ್ಯವಶ್ಯಕವಾಗಿದೆ. ಆದರೆ ತಂಡದಲ್ಲಿ ಉಳಿದವರಿಗೆ ಹೋಲಿಸಿಕೊಂಡರೆ, ನಾಯಕ ಹಾಗೂ ಉಪನಾಯಕನ ಪ್ರದರ್ಶನವೇ ತೀರ ಕಳಪೆಯಾಗಿದೆ. ಅದರಲ್ಲೂ ನಾಯಕ ಸೂರ್ಯಕುಮಾರ್ ಯಾದವ್ ಈ ಇಡೀ ವರ್ಷ ಲೆಕ್ಕಕಷ್ಟೇ ತಂಡದಲ್ಲಿದ್ದಾರೆ.

ಸೂರ್ಯಕುಮಾರ್ ಕಳೆದ 14 ತಿಂಗಳುಗಳಿಂದ ಭಾರತ ಟಿ20 ತಂಡದ ನಾಯಕರಾಗಿದ್ದು, 24 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಈ 24 ಪಂದ್ಯಗಳಲ್ಲೂ ಸೂರ್ಯಕುಮಾರ್ ಪ್ರದರ್ಶನ ಹೇಳಿಕೊಳ್ಳುವಂತಿಲ್ಲ. ಅದರಲ್ಲೂ ಈ ವರ್ಷ ಸೂರ್ಯಕುಮಾರ್ ಬ್ಯಾಟ್ನಿಂದ ಒಂದೇ ಒಂದು ಅರ್ಧಶತಕ ಇಲ್ಲದಿರುವುದು ಅವರ ಕಳಪೆ ಫಾರ್ಮ್‌ಗೆ ಹಿಡಿದ ಕೈಗನ್ನಡಿಯಾಗಿದೆ.

ಈ ವರ್ಷ 21 ಟಿ20 ಪಂದ್ಯಗಳನ್ನಾಡಿರುವ ಸೂರ್ಯಕುಮಾರ್ ಕೇವಲ 218 ರನ್ ಮಾತ್ರ ಕಲೆಹಾಕಿದ್ದಾರೆ. ಇದರಲ್ಲಿ ಇನ್ನೊಂದು ಕಳವಳಕಾರಿಯಾದ ಸಂಗತಿಯೆಂದರೆ, ಈ 22 ಇನ್ನಿಂಗ್ಸ್ಗಳಲ್ಲಿ ಅವರ ಸರಾಸರಿ ಕೇವಲ 13.62. ಸ್ಟ್ರೇಕ್ ರೇಟ್ ಕೂಡ ಕೇವಲ120 ರ ಆಸುಪಾಸಿನಲ್ಲಿದೆ. ಈ ವರ್ಷ ಅವರ ಅತ್ಯಧಿಕ ಸ್ಕೋರ್ 47.

2024 ರ ಅಕ್ಟೋಬರ್ 12 ರಂದು ಬಾಂಗ್ಲಾದೇಶ ವಿರುದ್ಧ ತಮ್ಮ ಕೊನೆಯ ಅರ್ಧಶತಕ ಬಾರಿಸಿದ್ದ ಸೂರ್ಯಕುಮಾರ್ಗೆ ಅಂದಿನಿಂದ ಒಂದೊಳ್ಳೆ ಇನ್ನಿಂಗ್ಸ್ ಆಡಲು ಸಾಧ್ಯವಾಗಿಲ್ಲ. 2025 ರಲ್ಲೂ ರನ್ ಬರ ಎದುರಿಸಿದ ಸೂರ್ಯ, ಒಂದೇ ಒಂದು ಅರ್ಧಶತಕವಿಲ್ಲದೆ ಈ ವರ್ಷವನ್ನು ಕೊನೆಗೊಳಿಸಿದ್ದಾರೆ. ಮುಂದಿನ ವರ್ಷ ಟಿ20 ವಿಶ್ವಕಪ್ಗೂ ಮುನ್ನ ನಡೆಯುವ ನ್ಯೂಜಿಲೆಂಡ್ ವಿರುದ್ಧವಾದರೂ ಸೂರ್ಯ ತಮ್ಮ ಫಾರ್ಮ್ ಕಂಡುಕೊಳ್ಳುತ್ತಾರಾ ಕಾದುನೋಡಬೇಕಿದೆ.