
ದಕ್ಷಿಣ ಆಫ್ರಿಕಾ ವಿರುದ್ದ ಭರ್ಜರಿ ಜಯದೊಂದಿಗೆ ವಿಶ್ವಕಪ್ ಅಭಿಯಾನ ಆರಂಭಿಸಿದ್ದ ಆಸ್ಟ್ರೇಲಿಯಾ ತಂಡಕ್ಕೆ ಇದೀಗ ಹಿನ್ನಡೆಯುಂಟಾಗಿದೆ. ತಂಡದ ಪ್ರಮುಖ ವೇಗಿ ಮಿಚೆಲ್ ಸ್ಟಾರ್ಕ್ ಗಾಯಗೊಂಡಿದ್ದಾರೆ.

ಶ್ರೀಲಂಕಾ ವಿರುದ್ದದ ಪಂದ್ಯಕ್ಕಾಗಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದ ವೇಳೆ ಸ್ಟಾರ್ಕ್ ಗಾಯಗೊಂಡಿದ್ದು, ಹೀಗಾಗಿ ಅರ್ಧದಲ್ಲೇ ಅಭ್ಯಾಸ ನಿಲ್ಲಿಸಿ ಮೈದಾನ ತೊರೆದಿದ್ದಾರೆ.

ಗುರುವಾರ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಲಿದ್ದು, ಇದಕ್ಕೂ ಮುನ್ನ ಮಿಚೆಲ್ ಸ್ಟಾರ್ಕ್ ಗಾಯಗೊಂಡಿರುವುದು ಆಸ್ಟ್ರೇಲಿಯಾ ಚಿಂತೆಯನ್ನು ಹೆಚ್ಚಿಸಿದೆ. ಏಕೆಂದರೆ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಸ್ಟಾರ್ಕ್ ಉತ್ತಮ ಬೌಲಿಂಗ್ ದಾಳಿ ನಡೆಸಿದ್ದರು.

ಈ ಹಿಂದೆ ಗಾಯದ ಸಮಸ್ಯೆಯಿಂದ ಬಳಲಿದ್ದ ಸ್ಟಾರ್ಕ್ ಇದೇ ಕಾರಣದಿಂದಾಗಿ ಐಪಿಎಲ್ನಲ್ಲಿ ಭಾಗವಹಿಸಲು ಹಿಂದೇಟು ಹಾಕಿದ್ದರು. ಅಷ್ಟೇ ಅಲ್ಲದೆ ಟಿ20 ವಿಶ್ವಕಪ್ಗಾಗಿ ಭರ್ಜರಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರು. ಸುಮಾರು ಆರು ತಿಂಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ಹೊರಗುಳಿದಿದ್ದ ಸ್ಟಾರ್ಕ್ ಟಿ20 ವಿಶ್ವಕಪ್ಗೂ ಮುನ್ನ ಯಾವುದೇ ಸರಣಿಯಲ್ಲಿ ಆಡಿರಲಿಲ್ಲ ಎಂಬುದು ವಿಶೇಷ.

ಆದರೀಗ ಅಭ್ಯಾಸದ ವೇಳೆ ಗಾಯಗೊಂಡಿರುವುದು ವಿಪರ್ಯಾಸ ಎನ್ನಬಹುದು. ಅದರಂತೆ ಅಕ್ಟೋಬರ್ 28 ರಂದು ನಡೆಯಲಿರುವ ಶ್ರೀಲಂಕಾ ವಿರುದ್ದದ ಪಂದ್ಯದಲ್ಲಿ ಸ್ಟಾರ್ಕ್ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ.