ಟಿ20 ವಿಶ್ವಕಪ್ ಆರಂಭವಾಗಿ ವಾರಗಳೇ ಕಳೆದಿವೆ. ಇದರೊಂದಿಗೆ ಪಂದ್ಯದಿಂದ ಪಂದ್ಯಕ್ಕೆ ರೋಚಕತೆಯು ಹೆಚ್ಚಿದೆ. ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಯಾರೂ ನಿರೀಕ್ಷಿಸದ ಪಲಿತಾಂಶಗಳು ಹೊರಬೀಳುತ್ತಿವೆ. ದುರ್ಬಲ ತಂಡಗಳೆಂದು ಪರಿಗಣಿಸಿದ ತಂಡಗಳು ಬಲಿಷ್ಠ ತಂಡಗಳಿಗೆ ಸೋಲಿನ ರುಚಿ ತೋರಿಸುತ್ತಿವೆ. ಇಂತಹ ಅನಿರೀಕ್ಷಿತ ಪಲಿತಾಂಶಗಳು ಈ ಆವೃತ್ತಿಯಲ್ಲಿ 4 ಬಾರಿ ಎದುರಾಗಿವೆ. ಅವುಗಳು ಯಾವುವು ಎಂಬುದರ ಪಟ್ಟಿ ಹೀಗಿದೆ.
ಈ ಅನಿರೀಕ್ಷಿತ ಪಲಿತಾಂಶಗಳಲ್ಲಿ ಪ್ರಮುಖವಾಗಿ ಇಂಗ್ಲೆಂಡ್ ಎದುರು ಐರ್ಲೆಂಡ್ ತಂಡ ಜಯ ಸಾಧಿಸಿದ್ದು ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ಈ ಉಭಯ ತಂಡಗಳ ಮುಖಾಮುಖಿಯಲ್ಲಿ ಆಂಗ್ಲರನ್ನು ಐರ್ಲೆಂಡ್ ತಂಡ 5 ರನ್‌ಗಳಿಂದ ಮಣಿಸುವುದರಲ್ಲಿ ಯಶಸ್ವಿಯಾಗಿತ್ತು. ಐರ್ಲೆಂಡ್ನ ಈ ಗೆಲುವಿನಲ್ಲಿ ಮಳೆ ಕೂಡ ಪರಿಣಾಮ ಬೀರಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕಾಗಿದೆ.
ಎರಡನೇಯದಾಗಿ ಟಿ20 ವಿಶ್ವಕಪ್ ಅರ್ಹತಾ ಸುತ್ತಿಬಲ್ಲಿ ಏಷ್ಯಾಕಪ್ ಚಾಂಪಿಯನ್ ತಂಡವಾದ ಶ್ರೀಲಂಕಾ, ನಮೀಬಿಯಾ ಎದುರು ಶರಣಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನಮೀಬಿಯಾ 163 ರನ್ ಗಳಿಸಿತ್ತು, ಆದರೆ ಶ್ರೀಲಂಕಾ ತಂಡ ಕೇವಲ 108 ರನ್ ಗಳಿಸಿ ಆಲೌಟ್ ಆಗಿತ್ತು. ಈ ಪಂದ್ಯವನ್ನು ನಮೀಬಿಯಾ 55 ರನ್‌ಗಳಿಂದ ಗೆದ್ದುಕೊಂಡಿತು.
ಮತ್ತೊಂದು ಅಚ್ಚರಿಯ ಪಲಿತಾಂಶವೆಂದರೆ ಟಿ20 ವಿಶ್ವಕಪ್ನ 2 ಬಾರಿಯ ಚಾಂಪಿಯನ್ ವಿಂಡೀಸ್ ತಂಡ ಬಿ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡದ ವಿರುದ್ಧ 42 ರನ್‌ಗಳ ಹೀನಾಯ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ 160 ರನ್ ಗಳಿಸಿದೆ, ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ ಕೇವಲ 118 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದೇ ಆವೃತ್ತಿಯಲ್ಲಿ ಮತ್ತೊಮ್ಮೆ ವೆಸ್ಟ್ ಇಂಡೀಸ್ ತಂಡ, ಐರ್ಲೆಂಡ್ ವಿರುದ್ಧ ಒಂಬತ್ತು ವಿಕೆಟ್‌ಗಳಿಂದ ಮುಜುಗರದ ಸೋಲನ್ನು ಅನುಭವಿಸಿತ್ತು. ಇಲ್ಲಿ ವೆಸ್ಟ್ ಇಂಡೀಸ್ ತಂಡ ಮೊದಲು ಬ್ಯಾಟಿಂಗ್ ಮಾಡಿ 146 ರನ್ ಗಳಿಸಿತು. ಈ ಗುರಿಯನ್ನು ಐರ್ಲೆಂಡ್ ತಂಡ 17.3 ಓವರ್‌ಗಳಲ್ಲಿ ಸಾಧಿಸಿತು. ಈ ಸೋಲಿನೊಂದಿಗೆ ವೆಸ್ಟ್ ಇಂಡೀಸ್ ಟೂರ್ನಿಯಿಂದ ಹೊರಬಿತ್ತು.
ಇನ್ನು ಟಿ20 ವಿಶ್ವಕಪ್‌ನಲ್ಲಿ ಆಘಾತಕ್ಕಾರಿ ಸೋಲುಂಡ ತಂಡಗಳಲ್ಲಿ ಪಾಕಿಸ್ತಾನ ತಂಡವೂ ಸೇರಿಕೊಂಡಿದೆ. ಗುರುವಾರ ನಡೆದ ರೋಚಕ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಪಾಕಿಸ್ತಾನವನ್ನು ಒಂದು ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ 130 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ ತಂಡ 129 ರನ್ ಗಳಿಸಲಷ್ಟೇ ಶಕ್ತವಾಗಿ ಕೇವಲ 1 ರನ್‌ಗಳಿಂದ ಸೋಲನುಭವಿಸಿತು.