- Kannada News Photo gallery Cricket photos T20 World Cup 2024: Aaron Jones breaks Yuvraj Singh's unique record
Aaron Jones: ಆರೋನ್ ಅಬ್ಬರಕ್ಕೆ ಯುವರಾಜ್ ಸಿಂಗ್ ದಾಖಲೆ ಧೂಳೀಪಟ
T20 World Cup 2024: ಟಿ20 ವಿಶ್ವಕಪ್ನ ಮೊದಲ ಪಂದ್ಯದಲ್ಲೇ 10 ಸಿಕ್ಸ್ ಸಿಡಿಸುವ ಮೂಲಕ ಅಮೆರಿಕನ್ ಬ್ಯಾಟರ್ ಆರೋನ್ ಜೋನ್ಸ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಕ್ರಿಸ್ ಗೇಲ್ ಬಳಿಕ ಈ ಸಾಧನೆ ಮಾಡಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಟಿ20 ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಆರಂಭಿಕನಲ್ಲದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
Updated on:Jun 04, 2024 | 12:53 PM

T20 World Cup 2024: ಟಿ20 ವಿಶ್ವಕಪ್ 2024ರ ಮೊದಲ ಪಂದ್ಯದಲ್ಲೇ ಅಬ್ಬರಿಸುವ ಮೂಲಕ ಅಮೆರಿಕ ಬ್ಯಾಟರ್ ಆರೋನ್ ಜೋನ್ಸ್ (Aaron Jones) ಹಲವು ದಾಖಲೆಗಳನ್ನು ಬರೆದಿದ್ದಾರೆ. ಈ ದಾಖಲೆಗಳಲ್ಲಿ ಒಂದು ದಾಖಲೆ ನಿರ್ಮಾಣವಾಗಿರುವುದು ಯುವರಾಜ್ ಸಿಂಗ್ ಅವರ ಅಪರೂಪದ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಅಂದರೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಕನಿಷ್ಠ 30 ಎಸೆತಗಳನ್ನು ಎದುರಿಸಿ ಅತ್ಯುತ್ತಮ ಸ್ಟ್ರೈಕ್ ರೇಟ್ನಲ್ಲಿ ರನ್ ಕಲೆಹಾಕಿದ ವಿಶ್ವ ದಾಖಲೆ ಯುವರಾಜ್ ಸಿಂಗ್ ಹೆಸರಿನಲ್ಲಿತ್ತು. 2007ರ ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಸಿಕ್ಸರ್ ಸಿಂಗ್ ಈ ಸಾಧನೆ ಮಾಡಿದ್ದರು.

ಆಸ್ಟ್ರೇಲಿಯಾ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅಬ್ಬರಿಸಿದ ಯುವರಾಜ್ ಸಿಂಗ್ 30 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 70 ರನ್ ಚಚ್ಚಿದ್ದರು. ಅದು ಕೂಡ 233.33 ರ ಸ್ಟ್ರೈಕ್ ರೇಟ್ನಲ್ಲಿ ಎಂಬುದು ವಿಶೇಷ. ಈ ಮೂಲಕ ಯುವಿ ಅತ್ಯುತ್ತಮ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ವಿಶೇಷ ದಾಖಲೆ ಬರೆದಿದ್ದರು.

ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ಆರೋನ್ ಜೋನ್ಸ್ ಯಶಸ್ವಿಯಾಗಿದ್ದಾರೆ. ಕೆನಡಾ ವಿರುದ್ಧದ ಪಂದ್ಯದಲ್ಲಿ 40 ಎಸೆತಗಳನ್ನು ಎದುರಿಸಿದ ಆರೋನ್ 10 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ ಅಜೇಯ 94 ರನ್ ಬಾರಿಸಿದ್ದಾರೆ. ಈ ಮೂಲಕ 235.00 ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿ ಯುವರಾಜ್ ಸಿಂಗ್ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಹಾಗೆಯೇ ಈ ಪಂದ್ಯದಲ್ಲಿ ಬಾರಿಸಿದ 10 ಸಿಕ್ಸ್ಗಳೊಂದಿಗೆ ಟಿ20 ವಿಶ್ವಕಪ್ ಇತಿಹಾಸದಲ್ಲೇ ಇನಿಂಗ್ಸ್ವೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಆರಂಭಿಕನಲ್ಲದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಆರೋನ್ ಜೋನ್ಸ್ ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ಸೌತ್ ಆಫ್ರಿಕಾದ ರೈಲಿ ರೊಸ್ಸೊವ್ ಹೆಸರಿನಲ್ಲಿತ್ತು. ರೊಸ್ಸೊವ್ 2007 ರ ಟಿ20 ವಿಶ್ವಕಪ್ನಲ್ಲಿ 8 ಸಿಕ್ಸ್ ಸಿಡಿಸಿ ಈ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಕೂಡ ಮುರಿದು ಆರೋನ್ ಜೋನ್ಸ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.
Published On - 10:08 am, Mon, 3 June 24




