
T20 World Cup 2024: ಟಿ20 ವಿಶ್ವಕಪ್ನ 28ನೇ ಪಂದ್ಯದಲ್ಲಿ ಇಂಗ್ಲೆಂಡ್ (England) ತಂಡವು ಭರ್ಜರಿ ಜಯ ಸಾಧಿಸಿದೆ. ಆದರೆ ಅದು ಅಂತಿಂಥ ಗೆಲುವಲ್ಲ ಎಂಬುದು ವಿಶೇಷ. ಓಮಾನ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಒಮಾನ್ ತಂಡವು ಇಂಗ್ಲೆಂಡ್ ಬೌಲರ್ಗಳ ಕರಾರುವಾಕ್ ದಾಳಿಗೆ ಕಕ್ಕಾಬಿಕ್ಕಿಯಾಗಿದ್ದರು. ಪರಿಣಾಮ 13.2 ಓವರ್ಗಳಲ್ಲಿ ಕೇವಲ 47 ರನ್ಗಳಿಸಿ ಒಮಾನ್ ತಂಡವು ಆಲೌಟ್ ಆಯಿತು.

48 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಫಿಲ್ ಸಾಲ್ಟ್ ಸ್ಪೋಟಕ ಆರಂಭ ಒದಗಿಸಿದ್ದರು. ಮೊದಲ ಓವರ್ನ ಮೊದಲೆರಡು ಎಸೆತಗಳಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ ಸಾಲ್ಟ್ ಅಬ್ಬರಿಸಿ ಔಟಾದರು. ಇನ್ನು ಜೋಸ್ ಬಟ್ಲರ್ 8 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ ಅಜೇಯ 24 ರನ್ ಚಚ್ಚಿದರು. ಈ ಮೂಲಕ ಇಂಗ್ಲೆಂಡ್ ತಂಡವು 3.1 ಓವರ್ಗಳಲ್ಲಿ 50 ರನ್ ಗಳಿಸಿ ಭರ್ಜರಿ ಜಯ ಸಾಧಿಸಿತು.

ಅಂದರೆ ಇಂಗ್ಲೆಂಡ್ ತಂಡವು ಈ ಪಂದ್ಯವನ್ನು ಕೇವಲ 19 ಎಸೆತಗಳಲ್ಲಿ ಮುಗಿಸಿದ್ದರು. ಇದರೊಂದಿಗೆ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅಮೋಘ ಗೆಲುವು ದಾಖಲಿಸಿದ ವಿಶೇಷ ದಾಖಲೆಯೊಂದು ಇಂಗ್ಲೆಂಡ್ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾ ತಂಡದ ಹೆಸರಿನಲ್ಲಿತ್ತು.

2014 ರ ಟಿ20 ವಿಶ್ವಕಪ್ನಲ್ಲಿ ಶ್ರೀಲಂಕಾ ವಿರುದ್ಧ ನೆದರ್ಲೆಂಡ್ಸ್ ತಂಡವು ಕೇವಲ 39 ರನ್ಗಳಿಗೆ ಆಲೌಟ್ ಆಗಿತ್ತು. ಈ ಗುರಿಯನ್ನು ಕೇವಲ 5 ಓವರ್ಗಳಲ್ಲಿ (30 ಎಸೆತಗಳು) ಚೇಸ್ ಮಾಡಿ ಶ್ರೀಲಂಕಾ ಭರ್ಜರಿ ಜಯ ಸಾಧಿಸಿತ್ತು. ಈ ಮೂಲಕ ಟಿ20 ವಿಶ್ವಕಪ್ನಲ್ಲಿ ಅತೀ ಹೆಚ್ಚು ಬಾಲ್ ಬಾಕಿ ಉಳಿಸಿ ಗೆದ್ದ ವಿಶ್ವ ದಾಖಲೆಯನ್ನು ಶ್ರೀಲಂಕಾ ತಂಡ ನಿರ್ಮಿಸಿದ್ದರು.

ಇದೀಗ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಇಂಗ್ಲೆಂಡ್ ಬ್ಯಾಟರ್ಗಳು ಯಶಸ್ವಿಯಾಗಿದ್ದಾರೆ. ಕೇವಲ 3.1 ಓವರ್ಗಳಲ್ಲಿ 48 ರನ್ಗಳ ಗುರಿಯನ್ನು ಚೇಸ್ ಮಾಡಿ ಇಂಗ್ಲೆಂಡ್ ಬ್ಯಾಟರ್ಗಳು 101 ಎಸೆತಗಳನ್ನು ಬಾಕಿ ಉಳಿಸಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅಮೋಘ ಗೆಲುವು ದಾಖಲಿಸಿ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.