India vs Pakistan: ಭಾರತ-ಪಾಕ್ ಮತ್ತೆ ಮುಖಾಮುಖಿ ಯಾವಾಗ?
Champions Trophy 2025: ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿದೆ. ಆ ತಂಡಗಳೆಂದರೆ... ಭಾರತ, ಪಾಕಿಸ್ತಾನ್, ಸೌತ್ ಆಫ್ರಿಕಾ, ನ್ಯೂಝಿಲೆಂಡ್, ಅಫ್ಘಾನಿಸ್ತಾನ್, ಇಂಗ್ಲೆಂಡ್, ಬಾಂಗ್ಲಾದೇಶ್ ಮತ್ತು ಆಸ್ಟ್ರೇಲಿಯಾ. ಈ ತಂಡಗಳ ನಡುವೆ ಚಾಂಪಿಯನ್ಸ್ ಟ್ರೋಫಿಗಾಗಿ ಸೆಣಸಾಟ ನಡೆಯಲಿದೆ.
Updated on: Jun 15, 2024 | 3:23 PM

T20 World Cup 2024: ಟಿ20 ವಿಶ್ವಕಪ್ನಿಂದ ಪಾಕಿಸ್ತಾನ್ (Pakistan) ತಂಡ ಹೊರಬಿದ್ದಿದೆ. ಮೊದಲ ಸುತ್ತಿನಲ್ಲೇ ಹೊರಬಿದ್ದಿರುವ ಕಾರಣ ಭಾರತ ಮತ್ತು ಪಾಕಿಸ್ತಾನ್ ನಡುವಣ ಮತ್ತೊಂದು ಕದನವನ್ನು ನಿರೀಕ್ಷಿಸುವಂತಿಲ್ಲ. ಏಕೆಂದರೆ, ಒಂದು ವೇಳೆ ಪಾಕಿಸ್ತಾನ್ ತಂಡ ಸೂಪರ್-8 ಹಂತಕ್ಕೇರಿದ್ದರೆ, ಸೆಮಿಫೈನಲ್ ಅಥವಾ ಫೈನಲ್ನಲ್ಲಿ ಮುಖಾಮುಖಿಯಾಗುವ ಸಾಧ್ಯತೆಗಳಿದ್ದವು.

ಆದರೀಗ ಟೀಮ್ ಇಂಡಿಯಾ ದ್ವಿತೀಯ ಸುತ್ತಿಗೆ ಅರ್ಹತೆ ಪಡೆದರೆ, ಅತ್ತ ಪಾಕಿಸ್ತಾನ್ ಮೊದಲ ಸುತ್ತಿನಲ್ಲೇ ಮುಗ್ಗರಿಸಿ ಗಂಟು ಮೂಟೆ ಕಟ್ಟಿದೆ. ಹೀಗಾಗಿ ಈ ಬಾರಿ ಟಿ20 ವಿಶ್ವಕಪ್ನಲ್ಲಿ ಉಭಯ ತಂಡಗಳು ಮತ್ತೆ ಮುಖಾಮುಖಿಯಾಗುವುದಿಲ್ಲ ಎಂಬುದು ಖಚಿತವಾಗಿದೆ.

ಇನ್ನು ಭಾರತ ಮತ್ತು ಪಾಕಿಸ್ತಾನ್ ನಡುವಣ ಮುಖಾಮುಖಿ ಯಾವಾಗ? ಎಂಬ ಪ್ರಶ್ನೆಗೆ ಸದ್ಯದ ಉತ್ತರ ಮುಂಬರುವ ಚಾಂಪಿಯನ್ಸ್ ಟ್ರೋಫಿ. 2025 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಯಲಿದೆ. ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗುವುದು ಖಚಿತ ಎಂದೇ ಹೇಳಬಹುದು.

ಏಕೆಂದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೇವಲ 8 ತಂಡಗಳು ಮಾತ್ರ ಕಣಕ್ಕಿಳಿಯಲಿದೆ. ಹೀಗಾಗಿ ಮೊದಲ ಸುತ್ತಿನಲ್ಲೇ ಭಾರತ ಮತ್ತು ಪಾಕಿಸ್ತಾನ್ ನಡುವಣ ಕದನವನ್ನು ನಿರೀಕ್ಷಿಸಬಹುದು. ಅದರಂತೆ ಸಾಂಪ್ರದಾಯಿಕ ಎದುರಾಳಿಗಳ ಕದನಕ್ಕಾಗಿ ಮುಂದಿನ ವರ್ಷದವರೆಗೆ ಕಾಯಲೇಬೇಕು.

ಚಾಂಪಿಯನ್ಸ್ ಟ್ರೋಫಿ ಯಾವಾಗ?: ಪ್ರಸ್ತುತ ಮಾಹಿತಿ ಪ್ರಕಾರ, ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಯಲಿದೆ. ಈ ಟೂರ್ನಿಯ ಆಯೋಜನೆಯ ಹಕ್ಕು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಕೈಯಲ್ಲಿದ್ದು, ಹೀಗಾಗಿ ಟೀಮ್ ಇಂಡಿಯಾ ಪಾಕ್ಗೆ ಚಾಂಪಿಯನ್ಸ್ ಟ್ರೋಫಿ ಆಡಲು ತೆರಳಿದೆಯಾ ಎಂಬುದೇ ಪ್ರಶ್ನೆ.

ಒಂದು ವೇಳೆ ಭಾರತ ತಂಡವು ಪಾಕ್ನಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದರೆ, ತಟಸ್ಥ ಸ್ಥಳದಲ್ಲಿ ಟೀಮ್ ಇಂಡಿಯಾದ ಪಂದ್ಯಗಳು ಆಯೋಜನೆಗೊಳ್ಳಬಹುದು. ಅದರಂತೆ ಯುಎಇ ಅಥವಾ ಶ್ರೀಲಂಕಾದಲ್ಲಿ ಭಾರತದ ಪಂದ್ಯಗಳು ನಡೆಯುವ ಸಾಧ್ಯತೆಯಿದೆ.



















