T20 World Cup 2024: ಟಿ20 ವಿಶ್ವಕಪ್ನ 26 ಪಂದ್ಯಗಳ ಮುಕ್ತಾಯದ ವೇಳೆ ನಾಲ್ಕು ತಂಡಗಳು ಸೂಪರ್-8 ಹಂತಕ್ಕೆ ಪ್ರವೇಶಿಸಿದೆ. ಹಾಗೆಯೇ ನಮೀಬಿಯಾ ಮತ್ತು ಒಮಾನ್ ತಂಡಗಳು ಈಗಾಗಲೇ ಟಿ20 ವಿಶ್ವಕಪ್ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಹಾಗಿದ್ರೆ ಟಿ20 ವಿಶ್ವಕಪ್ನ ದ್ವಿತೀಯ ಸುತ್ತಿಗೆ ಪ್ರವೇಶಿಸಿರುವ 4 ತಂಡಗಳಾವು ಎಂಬುದನ್ನು ನೋಡೋಣ...
1- ಭಾರತ: ಗ್ರೂಪ್-A ನಲ್ಲಿ ಕಣಕ್ಕಿಳಿಯುತ್ತಿರುವ ಟೀಮ್ ಇಂಡಿಯಾ ಈವರೆಗೆ ಮೂರು ಪಂದ್ಯಗಳನ್ನಾಡಿದೆ. ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಮಣಿಸಿದ್ದ ಭಾರತ ಆ ಬಳಿಕ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದಿತ್ತು. ಇದಾದ ಬಳಿಕ ಯುಎಸ್ಎ ವಿರುದ್ಧ ಗೆಲ್ಲುವ ಮೂಲಕ ಒಟ್ಟು 6 ಅಂಕಗಳನ್ನು ಕಲೆಹಾಕಿದೆ. ಈ ಆರು ಅಂಕಗಳೊಂದಿಗೆ ಇದೀಗ ಟೀಮ್ ಇಂಡಿಯಾ ಸೂಪರ್-8 ಹಂತಕ್ಕೇರಿದೆ.
2- ಆಸ್ಟ್ರೇಲಿಯಾ: ಗ್ರೂಪ್-B ನಲ್ಲಿ ಕಾಣಿಸಿಕೊಂಡಿರುವ ಆಸ್ಟ್ರೇಲಿಯಾ ತಂಡ ಮೊದಲ ಪಂದ್ಯದಲ್ಲಿ ಒಮಾನ್ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು. ಇದಾದ ಬಳಿಕ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ನಮೀಬಿಯಾ ವಿರುದ್ಧ ಗೆದ್ದು 6 ಅಂಕಗಳೊಂದಿಗೆ ಆಸ್ಟ್ರೇಲಿಯಾ ತಂಡ ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ.
3- ವೆಸ್ಟ್ ಇಂಡೀಸ್: ಗ್ರೂಪ್-C ನಲ್ಲಿ ಕಣಕ್ಕಿಳಿದಿರುವ ಆತಿಥೇಯ ವೆಸ್ಟ್ ಇಂಡೀಸ್ ತಂಡವು ಆಡಿರುವ ಮೂರು ಪಂದ್ಯಗಳಲ್ಲೂ ಜಯ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಪಪುವಾ ನ್ಯೂ ಗಿನಿಯಾ ವಿರುದ್ಧ ಜಯ ಸಾಧಿಸಿದ್ದ ವಿಂಡೀಸ್ ಪಡೆ, ಆ ಬಳಿಕ ಉಗಾಂಡ ಮತ್ತು ನ್ಯೂಝಿಲೆಂಡ್ ತಂಡಗಳಿಗೆ ಸೋಲುಣಿಸಿ ಇದೀಗ ಸೂಪರ್-8 ಹಂತಕ್ಕೇರಿದೆ.
4- ಸೌತ್ ಆಫ್ರಿಕಾ: ಗ್ರೂಪ್-D ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವ ಮೂಲಕ ಸೌತ್ ಆಫ್ರಿಕಾ ತಂಡ ಕೂಡ ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾಗೆ ಸೋಲುಣಿಸಿದ್ದ ಆಫ್ರಿಕನ್ನರು, 2ನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡದ ವಿರುದ್ಧ ಜಯ ಸಾಧಿಸಿದ್ದರು. ಇನ್ನು ಬಾಂಗ್ಲಾದೇಶ್ ವಿರುದ್ಧ ಗೆಲುವಿನೊಂದಿಗೆ ಇದೀಗ ಸೌತ್ ಆಫ್ರಿಕಾ ತಂಡ ಕೂಡ ಸೂಪರ್-8 ಹಂತಕ್ಕೇರಿದೆ.
ಸದ್ಯ 4 ತಂಡಗಳು ಸೂಪರ್-8 ಹಂತಕ್ಕೇರಿದ್ದು, ಇನ್ನುಳಿದ ನಾಲ್ಕು ಸ್ಥಾನಗಳಿಗಾಗಿ 14 ತಂಡಗಳ ನಡುವೆ ಪೈಪೋಟಿ ಇದೆ. ಈ ಪೈಪೋಟಿಯಲ್ಲಿ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸುವ ಮೂಲಕ ದ್ವಿತೀಯ ಸುತ್ತಿಗೆ ಪ್ರವೇಶಿಸುವ ತಂಡಗಳು ಯಾವುವು ಎಂಬುದೇ ಈಗ ಕುತೂಹಲ.