T20 World Cup 2024: ಈ ಬಾರಿಯ ಐಪಿಎಲ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದ ವಿರಾಟ್ ಕೊಹ್ಲಿ (Virat Kohli) ಟಿ20 ವಿಶ್ವಕಪ್ನಲ್ಲಿ ಮಂಕಾಗಿದ್ದಾರೆ. ಇದಕ್ಕೆ ಸಾಕ್ಷಿಯೇ ಮೊದಲ ಮೂರು ಪಂದ್ಯಗಳಲ್ಲಿ ಕೊಹ್ಲಿಯ ಪ್ರದರ್ಶನ. ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ಕೊಹ್ಲಿ ಈವರೆಗೆ ಎರಡಂಕಿ ಮೊತ್ತ ಕಲೆಹಾಕಿಲ್ಲ ಎಂಬುದೇ ಅಚ್ಚರಿ.
ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ 1 ರನ್ಗಳಿಸಿ ಔಟಾಗಿದ್ದ ಕೊಹ್ಲಿ, ಪಾಕಿಸ್ತಾನ್ ವಿರುದ್ಧ 4 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇನ್ನು ಯುಎಸ್ಎ ವಿರುದ್ಧ ಶೂನ್ಯಕ್ಕೆ ಔಟಾಗಿದ್ದಾರೆ. ಈ ಮೂರು ಪಂದ್ಯಗಳಲ್ಲಿ ಕೊಹ್ಲಿ ಎದುರಿಸಿದ್ದು ಕೇವಲ 9 ಎಸೆತಗಳನ್ನು ಮಾತ್ರ.
ಅಂದರೆ ಇಲ್ಲಿ ವಿರಾಟ್ ಕೊಹ್ಲಿಗೆ ಕ್ರೀಸ್ ಕಚ್ಚಿ ನಿಲ್ಲಲು ಸಾಧ್ಯವಾಗುತ್ತಿಲ್ಲ ಎಂಬುದೇ ಸತ್ಯ. ಹೀಗಾಗಿಯೇ ಪವರ್ಪ್ಲೇನಲ್ಲೇ ವಿಕೆಟ್ ಒಪ್ಪಿಸಿ ಹಿಂತಿರುಗುತ್ತಿದ್ದಾರೆ. ಅದರಲ್ಲೂ ಯುಎಸ್ಎ ಮತ್ತು ಐರ್ಲೆಂಡ್ನಂತಹ ತಂಡಗಳ ವಿರುದ್ಧ ಕೊಹ್ಲಿ ಅತ್ಯಂತ ಸುಲಭವಾಗಿ ವಿಕೆಟ್ ಒಪ್ಪಿಸಿರುವುದು ಇದೀಗ ಟೀಮ್ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿದೆ.
ಏಕೆಂದರೆ ಭಾರತದ ಪಾಲಿಗೆ ಸೂಪರ್-8 ಪಂದ್ಯಗಳು ನಿರ್ಣಾಯಕ. ಈ ವೇಳೆಗೆ ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಳ್ಳಬೇಕಾದ ಅನಿವಾರ್ಯತೆಯಿದೆ. ಇಲ್ಲಿ ಪ್ರತಿ ಪಂದ್ಯಗಳು ಮುಖ್ಯವಾಗಿರಲಿದ್ದು, ಅದರಲ್ಲೂ ಕೊಹ್ಲಿಯಂತಹ ಅನುಭವಿ ಆಟಗಾರನ ಪಾತ್ರ ನಿರ್ಣಾಯಕವಾಗಿರುತ್ತದೆ. ಹೀಗಾಗಿಯೇ ಕೊಹ್ಲಿಯ ಫಾರ್ಮ್ ಬಗ್ಗೆ ಟೀಮ್ ಇಂಡಿಯಾ ತಲೆಕೆಡಿಸಿಕೊಂಡಿದೆ.
ಐಪಿಎಲ್ 2024 ರಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ಅಮೆರಿಕಗೆ ಬಂದಿಳಿಯುತ್ತಿದ್ದಂತೆ ಫಾರ್ಮ್ ಕಳೆದುಕೊಂಡಿರುವುದು ಕೂಡ ಒಂದು ಅಚ್ಚರಿ. ಏಕೆಂದರೆ ಈ ಬಾರಿಯ ಐಪಿಎಲ್ನಲ್ಲಿ 15 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಕೊಹ್ಲಿ 741 ರನ್ ಬಾರಿಸಿ ಆರೆಂಜ್ ಕ್ಯಾಪ್ ವಿನ್ನರ್ ಆಗಿ ಹೊರಹೊಮ್ಮಿದ್ದರು.
ಇದಾಗಿ ಒಂದು ವಾರಗಳ ಬಳಿಕ ವಿರಾಟ್ ಕೊಹ್ಲಿ ಯುಎಸ್ಎ ಗೆ ತೆರಳಿದ್ದರು. ಐಪಿಎಲ್ನಲ್ಲಿ ಆರ್ಸಿಬಿ ಪರ ಆರಂಭಿಕನಾಗಿ ಮಿಂಚಿದ್ದರಿಂದ ಟಿ20 ವಿಶ್ವಕಪ್ನಲ್ಲಿ ಕೊಹ್ಲಿಯನ್ನು ಓಪನರ್ ಆಗಿ ಕಣಕ್ಕಿಳಿಸಲಾಗಿತ್ತು. ಆದರೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ನ ಈ ಲೆಕ್ಕಾಚಾರಗಳು ತಲೆಕೆಳಗಾಗಿದೆ.
ಟಿ20 ವಿಶ್ವಕಪ್ನಲ್ಲಿ ಆರಂಭಿಕನಾಗಿ ಆಡಿದ ಮೂರು ಪಂದ್ಯಗಳಿಂದ ವಿರಾಟ್ ಕೊಹ್ಲಿ ಕಲೆಹಾಕಿರುವುದು ಕೇವಲ 5 ರನ್ಗಳು. ಇಲ್ಲಿ ನ್ಯೂಯಾರ್ಕ್ ಪಿಚ್ ಬೌಲಿಂಗ್ಗೆ ಸಹಕಾರಿ ಎನ್ನುವುದಾದರೆ, ಅನುಭವಿ ಬ್ಯಾಟರ್ ಆಗಿರುವ ಕೊಹ್ಲಿ ಕನಿಷ್ಠ ಕ್ರೀಸ್ ಕಚ್ಚಿ ನಿಲ್ಲುವ ಪ್ರಯತ್ನವನ್ನಾದರೂ ಮಾಡಬಹುದಿತ್ತು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ.
ಆದರೆ ಕಿಂಗ್ ಕೊಹ್ಲಿ ಕಡೆಯಿಂದ ಅಂತಹ ಯಾವುದೇ ಪ್ರಯತ್ನ ಕೂಡ ಕಂಡು ಬರುತ್ತಿಲ್ಲ ಎಂಬುದೇ ಅಚ್ಚರಿ. ಹೀಗಾಗಿ ಕೊನೆಯ ಲೀಗ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿಫಲರಾದರೆ, ಆರಂಭಿಕನ ಸ್ಥಾನ ಕಳೆದುಕೊಳ್ಳಲಿದ್ದಾರೆ. ಅಲ್ಲದೆ ಈ ಹಿಂದಿನಂತೆ ಮತ್ತೆ ಮೂರನೇ ಕ್ರಮಾಂಕದಲ್ಲೇ ಆಡಬಹುದು.