
ಅಮೆರಿಕದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ನ ಗುಂಪು ಹಂತದ ಭಾಗಶಃ ಪಂದ್ಯಗಳು ಈಗಾಗಲೇ ಮುಗಿದಿವೆ. ಇನ್ನು ಕೆಲವೇ ಪಂದ್ಯಗಳು ಬಾಕಿ ಉಳಿದಿವೆ. ಮುಂದಿನ ಹಂತ ಅಂದರೆ ಸೂಪರ್ 8 ಸುತ್ತಿನ ಎಲ್ಲಾ ಪಂದ್ಯಗಳಿಗೆ ವೆಸ್ಟ್ ಇಂಡೀಸ್ ಆತಿಥ್ಯವಹಿಸುತ್ತಿದೆ. ಹೀಗಾಗಿ ಈ ಸುತ್ತಿಗೆ ಅರ್ಹತೆ ಪಡೆದಿರುವ ತಂಡಗಳು ಅಲ್ಲಿಗೆ ಪ್ರಯಾಣ ಬೆಳೆಸಬೇಕಾಗಿದೆ.

ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಕೂಡ ಸೂಪರ್ 8 ಸುತ್ತು ತಲುಪಿದೆ. ಆದರೆ ಟೀಂ ಇಂಡಿಯಾ ತನ್ನ ಕೊನೆಯ ಗುಂಪು ಹಂತದ ಪಂದ್ಯವನ್ನು ಜೂನ್ 15 ರಂದು ಕೆನಡಾ ವಿರುದ್ಧ ಆಡಲಿದೆ. ಇದಾದ ಬಳಿಕ ಸೂಪರ್-8 ಸುತ್ತಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಭಿಯಾನ ಆರಂಭಿಸಲಿದೆ. ಜೂನ್ 24 ರಂದು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ.

ಆದರೆ ಅದಕ್ಕೂ ಮುನ್ನ ಟೀಂ ಇಂಡಿಯಾ ಪಾಳಯದಿಂದ ದೊಡ್ಡ ಸುದ್ದಿಯೊಂದು ಹೊರಬಿದ್ದಿದ್ದು, ತಂಡದ ಆಟಗಾರರಾದ ಶುಭ್‌ಮನ್ ಗಿಲ್ ಮತ್ತು ಅವೇಶ್ ಖಾನ್ ಅವರು ಟಿ20 ವಿಶ್ವಕಪ್ ನಡುವೆ ಭಾರತಕ್ಕೆ ಮರಳಬೇಕಾಗಬಹುದು ಎಂದು ಹೇಳಲಾಗುತ್ತಿದೆ.

ಆದಾಗ್ಯೂ, ಈ ಇಬ್ಬರೂ ಆಟಗಾರರು ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಬದಲಿಗೆ ಈ ಇಬ್ಬರನ್ನು ಮೀಸಲು ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಶುಭಮನ್ ಗಿಲ್ ಮತ್ತು ಅವೇಶ್ ಖಾನ್ ಅವರ ವೀಸಾಗಳಿಗೆ ಅಮೆರಿಕದವರೆಗೆ ಮಾತ್ರ ಅನುಮತಿ ನೀಡಲಾಗಿತ್ತು.

ಈಗಾಗಲೇ ಭಾರತ ತಂಡ ಅಮೆರಿಕದಲ್ಲಿ ತನ್ನ ಮೊದಲ ಮೂರು ಪಂದ್ಯಗಳನ್ನು ಆಡಿದೆ. ಈಗ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ನೆಲದಲ್ಲಿ ಆಡಬೇಕಿದೆ. ಆದ್ದರಿಂದ, ವೀಸಾ ಸಂಬಂಧಿತ ಕಾರಣಗಳಿಂದ ಶುಭ್‌ಮನ್ ಗಿಲ್ ಮತ್ತು ಅವೇಶ್ ಖಾನ್ ಭಾರತಕ್ಕೆ ಮರಳಬೇಕಾಗಬಹುದು. ಏಕೆಂದರೆ ಇಬ್ಬರಿಗೂ ವೆಸ್ಟ್ ಇಂಡೀಸ್ವರೆಗೆ ವೀಸಾ ನೀಡಲಾಗಿಲ್ಲ ಎಂದು ಹೇಳಲಾಗುತ್ತಿದೆ.

ಭಾರತ ತಂಡವ ಟಿ20 ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಸೋಲಿಸಿತ್ತು. ಇದಾದ ಬಳಿಕ ಪಾಕಿಸ್ತಾನವನ್ನು ಹೀನಾಯವಾಗಿ ಸೋಲುಣಿಸಿತು. ಹಾಗೆಯೇ ತನ್ನ ಮೂರನೇ ಪಂದ್ಯದಲ್ಲಿ ಭಾರತವು ಆತಿಥೇಯ ಅಮೆರಿಕವನ್ನು ಸಹ ಸೋಲಿಸಿತು. ಈ ಮೂಲಕ ಸತತ 3 ಗೆಲುವಿನಿಂದ ಭಾರತ ತಂಡ ಸೂಪರ್-8 ಸುತ್ತು ತಲುಪಿದೆ.