
ಐಸಿಸಿ ಟಿ20 ವಿಶ್ವಕಪ್ 2026 ಕ್ಕೆ ಕ್ಷಣಗಣನೆ ಆರಂಭವಾಗಿದೆ. ಫೆಬ್ರವರಿ 7 ರಂದು ಪಂದ್ಯಾವಳಿ ಆರಂಭವಾಗಲಿದ್ದು, ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಸೇರಿದಂತೆ ಹಲವಾರು ತಂಡಗಳು ತಮ್ಮ ತಂಡಗಳನ್ನು ಈಗಾಗಲೇ ಘೋಷಿಸಿವೆ. ಆದಾಗ್ಯೂ, ಪಂದ್ಯಾವಳಿಗೂ ಮುನ್ನ ಅಫ್ಘಾನಿಸ್ತಾನಕ್ಕೆ ದೊಡ್ಡ ಹಿನ್ನಡೆಯುಂಟಾಗಿದ್ದು, ಗಾಯದಿಂದಾಗಿ 2026 ರ ಟಿ20 ವಿಶ್ವಕಪ್‌ನಿಂದ ಅಫ್ಘಾನ್ನ ಸ್ಟಾರ್ ಆಟಗಾರ ಹೊರಬಿದ್ದಿದ್ದಾರೆ.

ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ನವೀನ್ ಉಲ್ ಹಕ್ ಮತ್ತೆ ಗಾಯಗೊಂಡಿದ್ದಾರೆ. ಹೀಗಾಗಿ ಮುಂದಿನ ವಾರ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿ ಮತ್ತು 2026 ರ ಟಿ20 ವಿಶ್ವಕಪ್‌ನಿಂದ ಅವರನ್ನು ಹೊರಗಿಡಲಾಗಿದೆ.

ವರದಿಗಳ ಪ್ರಕಾರ, ನವೀನ್ ಈ ತಿಂಗಳ ಕೊನೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಆದಾಗ್ಯೂ, ಅವರ ಗಾಯದ ಬಗ್ಗೆ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಲಾಗಿಲ್ಲ. ನವೀನ್ ಉಲ್ ಹಕ್ ಕೊನೆಯ ಬಾರಿಗೆ ಡಿಸೆಂಬರ್ 2024 ರಲ್ಲಿ ಅಫ್ಘಾನಿಸ್ತಾನ ಪರ ಆಡಿದ್ದರು. ಭುಜದ ಗಾಯದಿಂದಾಗಿ ಅವರನ್ನು 2025 ರ ಏಷ್ಯಾಕಪ್‌ನಿಂದಲೂ ಹೊರಗಿಡಲಾಗಿತ್ತು.

ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಅವರ ಬದಲಿ ಆಟಗಾರರನ್ನು ಇನ್ನೂ ಘೋಷಿಸಿಲ್ಲ. ಆದಾಗ್ಯೂ, ಟಿ20 ವಿಶ್ವಕಪ್‌ಗಾಗಿ ಮೀಸಲು ಆಟಗಾರರಲ್ಲಿ ಮಿಸ್ಟರಿ ಸ್ಪಿನ್ನರ್ ಗಜನ್‌ಫರ್, ಬ್ಯಾಟ್ಸ್‌ಮನ್ ಇಜಾಜ್ ಅಹ್ಮದ್‌ಜೈ ಮತ್ತು ವೇಗದ ಬೌಲರ್ ಜಿಯಾ ಉರ್ ರೆಹಮಾನ್ ಶರೀಫಿ ಸೇರಿದ್ದಾರೆ, ಅವರಲ್ಲಿ ಯಾರನ್ನಾದರೂ ಮುಖ್ಯ ತಂಡದಲ್ಲಿ ಸೇರಿಸಿಕೊಳ್ಳಬಹುದು.

2026 ರ T20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡ ಡಿ ಗುಂಪಿನಲ್ಲಿ ಸ್ಥಾನ ಪಡಿದಿದೆ. ಈ ಗುಂಪಿನಲ್ಲಿ ಅಫ್ಘಾನಿಸ್ತಾನವನ್ನು ಹೊರತುಪಡಿಸಿ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಯುಎಇ ಮತ್ತು ಕೆನಡಾ ತಂಡಗಳು ಸ್ಥಾನ ಪಡೆದಿವೆ. ಅಫ್ಘನ್ ತಂಡವು ಫೆಬ್ರವರಿ 8 ರಂದು ಚೆನ್ನೈನಲ್ಲಿ ನ್ಯೂಜಿಲೆಂಡ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.

ಅಫ್ಘಾನಿಸ್ತಾನ ತಂಡ: ರಶೀದ್ ಖಾನ್ (ನಾಯಕ), ಇಬ್ರಾಹಿಂ ಝದ್ರಾನ್ (ಉಪನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಮೊಹಮ್ಮದ್ ಇಶಾಕ್ (ವಿಕೆಟ್ ಕೀಪರ್), ಸೇದಿಕುಲ್ಲಾ ಅಟಲ್, ದರ್ವಿಶ್ ರಸೂಲಿ, ಶಾಹಿದುಲ್ಲಾ ಕಮಾಲ್, ಅಜ್ಮತುಲ್ಲಾ ಉಮರ್ಜಾಯ್, ಗುಲ್ಬದಿನ್ ನೈಬ್, ಮೊಹಮ್ಮದ್ ನಬಿ, ನೂರ್ ಅಹ್ಮದ್, ಮುಜೀಬ್ ಉರ್ ರೆಹಮಾನ್, ಫಜಲ್ ಹಕ್ ಫಾರೂಕಿ ಮತ್ತು ಅಬ್ದುಲ್ಲಾ ಅಹ್ಮದ್ಝೈ. ಮೀಸಲು ಆಟಗಾರರು: AM ಗಜನ್ಫರ್, ಇಜಾಜ್ ಅಹ್ಮದ್ಝೈ ಮತ್ತು ಜಿಯಾ ಉರ್ ರೆಹಮಾನ್ ಶರೀಫಿ.