Updated on: Feb 24, 2023 | 10:44 AM
ಪ್ರತಿ ಬಾರಿಯೂ ಪ್ರಶಸ್ತಿ ಗೆದ್ದೆ ಗೆಲ್ಲುವ ಹುಮ್ಮಸಿನೊಂದಿಗೆ ಅಖಾಡಕ್ಕಿಳಿಯುವ ಭಾರತ ವನಿತಾ ತಂಡ ಪ್ರತಿ ಬಾರಿಯೂ ತಾನು ಮಾಡುವ ಕೆಲವು ತಪ್ಪುಗಳಿಂದ ಐಸಿಸಿ ಟ್ರೋಫಿ ಎತ್ತಿಹಿಡಿಯವುದರಿಂದ ವಂಚಿತಗೊಳ್ಳುತ್ತಿದೆ. ಇದಕ್ಕೆ ನಿನ್ನೆಯ ಪಂದ್ಯವೇ ಸಾಕ್ಷಿಯಾಗಿದೆ. ಟೀಂ ಇಂಡಿಯಾ ಈ ರೀತಿಯಾಗಿ ಪಂದ್ಯ ಕೈಚೆಲ್ಲಿರುವುದು ಇದೇ ಮೊದಲಲ್ಲ. ಈ ಮೊದಲು ಕೂಡ ಭಾರತ ವನಿತಾ ತಂಡ ಪ್ರಮುಖ ಪಂದ್ಯಗಳಲ್ಲಿ ತಾನು ಮಾಡಿದ ತಪ್ಪುಗಳಿಂದಲೇ ಸೋಲನುಭವಿಸಿದೆ. ಅಂತಹ ಪ್ರಮುಖ ಪಂದ್ಯಗಳ ವಿವರ ಇಲ್ಲಿದೆ.
2017ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 228 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ್ದ ಟೀಂ ಇಂಡಿಯಾ ಒಂದು ಹಂತದಲ್ಲಿ ಬಲಿಷ್ಠ ಸ್ಥಿತಿಯಲ್ಲಿತ್ತು. ಆದರೆ ನಂತರ ವಿಕೆಟ್‌ಗಳ ಸುರಿಮಳೆಯುಂಟಾಗಿ ಇಂಗ್ಲೆಂಡ್ ತಂಡ 9 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
2018ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿಯೂ ಇದೇ ರೀತಿ ಆಯಿತು. ಭಾರತ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿದ ಇಂಗ್ಲೆಂಡ್ ಭಾರತದ ಮಹಾಕನಸಿಗೆ ಮುಳ್ಳಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಕೇವಲ 112 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ವನಿತೆಯರು ಕೇವಲ 28 ರನ್‌ಗಳ ಅಂತರದಲ್ಲಿ ಕೊನೆಯ 8 ವಿಕೆಟ್‌ಗಳನ್ನು ಕಳೆದುಕೊಂಡರು. ಭಾರತ ನೀಡಿದ 113 ರನ್‌ಗಳ ಸವಾಲನ್ನು ಇಂಗ್ಲೆಂಡ್ 8 ವಿಕೆಟ್ ಮತ್ತು 17 ಎಸೆತಗಳು ಬಾಕಿ ಇರುವಂತೆಯೇ ಸಾಧಿಸಿತು.
ಟಿ20 ವಿಶ್ವಕಪ್ 2020ರ ಫೈನಲ್‌ನಲ್ಲಿ ಭಾರತ ಏಕಪಕ್ಷೀಯವಾಗಿ ಸೋಲನುಭವಿಸಿತ್ತು. ಅಂದೂ ಕೂಡ ಆಸ್ಟ್ರೇಲಿಯದ ಮುಂದೆ ಶರಣಾಗಿದ್ದ ಭಾರತ ತಂಡ ಪ್ರಶಸ್ತಿಯ ಹತ್ತಿರ ಬಂದು ಬರಿಗೈಯಲ್ಲಿ ವಾಪಸ್ಸಾಗಿತ್ತು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 184 ರನ್ ಗಳಿಸಿದ್ದರೆ, ಟೀಂ ಇಂಡಿಯಾ ಕೇವಲ 99 ರನ್‌ಗಳಿಗೆ ಆಲೌಟ್ ಆಯಿತು.
2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಟೀಂ ಇಂಡಿಯಾದ ಕೈಯಿಂದ ಚಿನ್ನದ ಪದಕ ಕೈ ತಪ್ಪಿತ್ತು. ಇಲ್ಲೂ ಆಸ್ಟ್ರೇಲಿಯದೆದುರು ಭಾರತ ಸೋಲೊಪ್ಪುಕೊಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಭಾರತಕ್ಕೆ 162 ರನ್‌ಗಳ ಗೆಲುವಿನ ಗುರಿ ನೀಡಿತ್ತು. ಕೊನೆಯ ಓವರ್‌ನವರೆಗೂ ಪಂದ್ಯ ಗೆಲ್ಲಲು ಟೀಂ ಇಂಡಿಯಾ ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಹೀಗಾಗಿ ಟೀಂ ಇಂಡಿಯಾ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು.
ಗುರುವಾರ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾಗೆ ಈ ಎಲ್ಲಾ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶವಿತ್ತು ಆದರೆ ಮತ್ತೆ ಕೈ ತಪ್ಪಿತು. 2023 ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ತಂಡ ರೋಚಕ ಪಂದ್ಯದಲ್ಲಿ ಐದು ರನ್‌ಗಳಿಂದ ಸೋತಿತ್ತು. ಈ ಮೂಲಕ ಮತ್ತೊಮ್ಮೆ ಐಸಿಸಿ ಈವೆಂಟ್ನಲ್ಲಿ ತನ್ನ ಸೋಲಿನ ಸರಣಿಯನ್ನು ಮುಂದುವರೆಸಿತು.