Updated on:Feb 24, 2023 | 3:33 PM
ಕಳೆದ ವರ್ಷವಷ್ಟೇ ಅಲಿಬಾಗ್‌ನಲ್ಲಿ ದುಬಾರಿ ಬೆಲೆಯ ವಿಲ್ಲಾ ಖರೀದಿಸಿದ್ದ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಇದೀಗ ಅಲಿಬಾಗ್‌ನಲ್ಲಿಯೇ ಮತ್ತೊಂದು ಮನೆ ಖರೀದಿಸಿದ್ದಾರೆ. ಅವಾಸ್ ಲಿವಿಂಗ್‌ನಲ್ಲಿ ಕೊಹ್ಲಿ ಹೊಸ ವಿಲ್ಲಾ ಖರೀದಿಸಿದ್ದು, ಇದರ ಬೆಲೆ ಸುಮಾರು 6 ಕೋಟಿ ಎಂದು ಹೇಳಲಾಗುತ್ತಿದೆ. ಈ ವಿಲ್ಲಾ 2000 ಚದರ ಅಡಿ ವಿಸ್ತೀರ್ಣ ಹೊಂದಿದೆ.
ಕೊಹ್ಲಿಯ ವಿಲ್ಲಾದ ಬಗ್ಗೆ ಮಾಹಿತಿ ನೀಡಿರುವ ಅವಾಸ್ ಲಿವಿಂಗ್ನ ಕಾನೂನು ಸಲಹೆಗಾರ ಅಡ್ವೊಕೇಟ್ ಮಹೇಶ್ ಮ್ಹಾತ್ರೆ, ಕೊಹ್ಲಿ ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧದ 4 ಟೆಸ್ಟ್ ಸರಣಿಯಲ್ಲಿ ನಿರತರಾಗಿರುವುದರಿಂದ ಅವರ ಸಹೋದರ ವಿಕಾಸ್ ಕೊಹ್ಲಿ ನೋಂದಣಿಯಂತಹ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ಹೊಸ ವಿಲ್ಲಾದ ನೋಂದಣಿ ಶುಲ್ಕಕ್ಕಾಗಿ ಕೊಹ್ಲಿ 36 ಲಕ್ಷ ರೂ. ಪಾವತಿಸಿದ್ದು, ಈ ಹೊಸ ವಿಲ್ಲಾದಲ್ಲಿ ಸರಿಸುಮಾರು 400 ಚದರ ಅಡಿ ಅಳತೆಯ ದೊಡ್ಡ ಈಜುಕೊಳವಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಲಿಬಾಗ್‌ನಲ್ಲಿಯೇ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಫಾರ್ಮ್ ಹೌಸ್ ಖರೀದಿಸಿದ್ದರು. ಈ ವಿಲ್ಲಾ ಖರೀದಿಗಾಗಿ ಕೊಹ್ಲಿ ಸುಮಾರು 19.24 ಕೋಟಿ ರೂಪಾಯಿ ಖರ್ಚು ಮಾಡಿದ್ದರು. 36 ಸಾವಿರದ 59 ಚದರ ಅಡಿ ವಿಸ್ತೀರ್ಣದ ಈ ಫಾರ್ಮ್ ಹೌಸ್ ಖರೀದಿಗಾಗಿ ಕೊಹ್ಲಿ, 1.15 ಕೋಟಿ ರೂಪಾಯಿಯನ್ನು ಮುದ್ರಾಂಕ ಶುಲ್ಕವಾಗಿ ಪಾವತಿಸಿದ್ದರು.
ಸದ್ಯ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಕೊಹ್ಲಿ ಬ್ಯುಸಿಯಾಗಿದ್ದಾರೆ. 4 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದೆ. ಸರಣಿಯ ಮೂರನೇ ಪಂದ್ಯ ಇಂದೋರ್‌ನಲ್ಲಿ ಮಾರ್ಚ್ 1 ರಿಂದ ನಡೆಯಲಿದೆ.
Published On - 3:33 pm, Fri, 24 February 23