Tamim Iqbal: 24 ಗಂಟೆಗಳಲ್ಲಿ ಯು ಟರ್ನ್; ಪ್ರಧಾನಿ ಮಾತಿಗೆ ತಲೆಬಾಗಿದ ಬಾಂಗ್ಲಾ ತಂಡದ ನಾಯಕ
Tamim Iqbal: ನಿವೃತ್ತಿ ಘೋಷಿಸಿದ ಬಳಿಕ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಭೇಟಿ ಮಾಡಿದ್ದ ತಮೀಮ್, ಪ್ರಧಾನಿ ಅವರ ಸಲಹೆಯ ಮೇರೆಗೆ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
1 / 7
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯಲ್ಲಿ ನಾಯಕತ್ವಕ್ಕೆ ಸಂಬಂಧಿಸಿದ ನಾಟಕ ಮತ್ತೊಮ್ಮೆ ಹೊಸ ಹಂತ ತಲುಪಿದೆ. ಎರಡು ದಿನಗಳ ಹಿಂದೆ ಅಂದರೆ, ಜುಲೈ 6 ರಂದು ಪತ್ರಿಕಾಗೋಷ್ಠಿ ಕರೆದಿದ್ದ ಬಾಂಗ್ಲಾ ಏಕದಿನ ತಂಡದ ನಾಯಕ ತಮೀಮ್ ಇಕ್ಬಾಲ್ ಹಠಾತ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಇದಕ್ಕಿದಂತೆ ತಮೀಮ್ ತೆಗೆದುಕೊಂಡಿದ್ದ ಈ ನಿರ್ಧಾರ ಬಾಂಗ್ಲಾದೇಶ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿತ್ತು.
2 / 7
ಆದರೆ ಇದೀಗ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿ 24 ಗಂಟೆ ಕಳೆಯುವ ಮುನ್ನವೇ ತಮೀಮ್ ಇಕ್ಬಾಲ್ ತಮ್ಮ ನಿರ್ಧಾರವನ್ನು ಹಿಂಪಡೆದುಕೊಂಡಿದ್ದಾರೆ. ಮಾಹಿತಿ ಪ್ರಕಾರ, ನಿವೃತ್ತಿ ಘೋಷಿಸಿದ ಬಳಿಕ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಭೇಟಿ ಮಾಡಿದ್ದ ತಮೀಮ್, ಪ್ರಧಾನಿ ಅವರ ಸಲಹೆಯ ಮೇರೆಗೆ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
3 / 7
ವಾಸ್ತವವಾಗಿ ಬುಧವಾರದಂದು ಅಂದರೆ, ಜುಲೈ 5 ರಂದು ಅಫ್ಘಾನಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಸೋಲನುಭವಿಸಿತ್ತು. ಈ ಸೋಲಿನ 12 ಗಂಟೆಗಳ ನಂತರ ತಮೀಮ್ ನಿವೃತ್ತಿ ನಿರ್ಧಾರವನ್ನು ತೆಗೆದುಕೊಂಡಿದ್ದರು. ಆದರೆ, ಅವರ ನಿರ್ಧಾರಕ್ಕೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜ್ಮುಲ್ ಹಸನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ನಿರ್ಧಾರ ಸರಿಯಲ್ಲ ಎಂದಿದ್ದರು. ಅಲ್ಲದೆ ತಮೀಮ್ ತನ್ನ ನಿರ್ಧಾರವನ್ನು ಬದಲಾಯಿಸುವ ಭರವಸೆಯನ್ನು ಹಸನ್ ವ್ಯಕ್ತಪಡಿಸಿದ್ದರು.
4 / 7
ಇನ್ನು ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂಪಡೆದಿರುವ ಬಗ್ಗೆ ಮಾತನಾಡಿದ ತಮೀಮ್, ಪ್ರಧಾನಿ ನನಗೆ ಕರೆ ಮಾಡಿ ಗದರಿಸಿದರು ಮತ್ತು ನಿವೃತ್ತಿಯನ್ನು ಹಿಂತೆಗೆದುಕೊಳ್ಳುವಂತೆ ಹೇಳಿದರು. ಹೀಗಾಗಿ ನಾನು ನಿರ್ಧಾರವನ್ನು ಹಿಂಪಡೆದಿದ್ದೇನೆ ಎಂದು ತಮೀಮ್ ಹೇಳಿದ್ದಾರೆ.
5 / 7
ಶುಕ್ರವಾರದಂದು ದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಭೇಟಿಯಾಗಿದ್ದ ತಮೀಮ್ ಅವರೊಂದಿಗೆ ಬಾಂಗ್ಲಾದೇಶದ ಮಾಜಿ ಅನುಭವಿ ನಾಯಕ ಮಶ್ರಫೆ ಮೊರ್ತಾಜಾ ಸಹ ಉಪಸ್ಥಿತರಿದ್ದರು ಎಂದು ತಿಳಿದುಬಂದಿದೆ. ವಾಸ್ತವವಾಗಿ ತಮೀಮ್ ಈ ನಿರ್ಧಾರ ಕೈಗೊಳ್ಳಲು ಕಾರಣವೂ ಇದ್ದು, ಅವರು ಕೆಲವು ಸಮಯದಿಂದ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಕಾರಣದಿಂದಾಗಿ ಮಂಡಳಿಯ ಅಧ್ಯಕ್ಷರು ಅವರ ಮೇಲೆ ಪ್ರಶ್ನೆಗಳನ್ನು ಎತ್ತಿದ್ದರು.
6 / 7
ಇದೀಗ ತಮೀಮ್ ಅವರು ಒಂದೂವರೆ ತಿಂಗಳ ವಿರಾಮ ತೆಗೆದುಕೊಳ್ಳುವ ಮೂಲಕ ತಮ್ಮ ಚಿಕಿತ್ಸೆಯನ್ನು ಪೂರ್ಣಗೊಳಿಸಲು ಪ್ರಧಾನಿ ಸಮಯಾವಕಾಶ ನೀಡಿದ್ದಾರೆ. ನಂತರ ಅವರು ತಂಡಕ್ಕೆ ಹಿಂತಿರುಗಿ ಏಷ್ಯಾಕಪ್ ಹಾಗೂ ವಿಶ್ವಕಪ್‌ನಲ್ಲಿ ತಂಡದ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
7 / 7
ತಮೀಮ್ ನಿವೃತ್ತಿ ಘೋಷಿಸಿದ ಬಳಿಕ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯ ಉಳಿದ ಪಂದ್ಯಗಳಿಗೆ ಲಿಟ್ಟನ್ ದಾಸ್ ಅವರನ್ನು ಬಾಂಗ್ಲಾ ತಂಡದ ನಾಯಕನನ್ನಾಗಿ ಮಾಡಲಾಗಿತ್ತು. ಆದರೆ ಇದೀಗ ತಮೀಮ್ ತಮ್ಮ ನಿರ್ಧಾರವನ್ನು ಹಿಂಪಡೆದುಕೊಂಡಿರುವುದರಿಂದ ಯಾರು ತಂಡವನ್ನು ಮುನ್ನಡೆಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.