
ಸೌತ್ ಆಫ್ರಿಕಾ ವಿರುದ್ಧದ ಟಿ೨೦ ಸರಣಿಯಲ್ಲಿ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ಅದು ಸಹ ಬರೋಬ್ಬರಿ 101 ರನ್ ಗಳ ಭರ್ಜರಿ ಜಯದೊಂದಿಗೆ ಎಂಬುದು ವಿಶೇಷ. ಕಟಕ್ನ ಬಾರಾಬತಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 175 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ತಂಡವನ್ನು ಕೇವಲ 74 ರನ್ ಗಳಿಗೆ ಆಲೌಟ್ ಮಾಡುವಲ್ಲಿ ಭಾರತೀಯ ಬೌಲರ್‌ಗಳು ಯಶಸ್ವಿಯಾಗಿದ್ದಾರೆ.

ಇದರೊಂದಿಗೆ ಬಲಿಷ್ಠ ಸೌತ್ ಆಫ್ರಿಕಾ ತಂಡವನ್ನು ಟಿ೨೦ ಕ್ರಿಕೆಟ್ ನಲ್ಲಿ ಮೂರು ಬಾರಿ ನೂರಕ್ಕಿಂತ ಕಡಿಮೆ ಸ್ಕೋರ್ ಗೆ ಆಲೌಟ್ ಮಾಡಿದ ವಿಶ್ವದ ಮೊದಲ ತಂಡವೆಂಬ ಹೆಗ್ಗಳಿಕೆ ಟೀಮ್ ಇಂಡಿಯಾ ಪಾಲಾಯಿತು. ಭಾರತ ತಂಡವನ್ನು ಹೊರತುಪಡಿಸಿ ಯಾವುದೇ ಟೀಮ್ ಸೌತ್ ಆಫ್ರಿಕಾ ತಂಡವನ್ನು ಕಡಿಮೆ ಮೊತ್ತಕ್ಕೆ ಮೂರು ಬಾರಿ ಆಲೌಟ್ ಮಾಡಿಲ್ಲ.

ಭಾರತ ತಂಡವು ಮೊದಲ ಬಾರಿ ಸೌತ್ ಆಫ್ರಿಕಾ ತಂಡವನ್ನು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿದ್ದು 2022 ರಲ್ಲಿ. ರಾಜ್ ಕೋಟ್ ನಲ್ಲಿ ನಡೆದ ಪಂದ್ಯದಲ್ಲಿ ಸೌತ್ ಆಫ್ರಿಕಾ ಕೇವಲ 87 ರನ್ ಗೆ ಆಲೌಟ್ ಆಗಿದ್ದರು. ಇದಾದ ಬಳಿಕ 2023 ರಲ್ಲಿ ಜೊಹಾನ್ಸ್ ಬರ್ಗ್ ನಲ್ಲಿ 95 ರನ್ ಗಳಿಗೆ ಆಲೌಟ್ ಮಾಡಿದ್ದರು.

ಇದೀಗ ಮತ್ತೊಮ್ಮೆ ಸೌತ್ ಆಫ್ರಿಕಾ ತಂಡವನ್ನು ಕೇವಲ 74 ರನ್ ಗಳಿಗೆ ಮಕಾಡೆ ಮಲಗಿಸುವಲ್ಲಿ ಭಾರತೀಯ ಬೌಲರ್‌ಗಳು ಯಶಸ್ವಿಯಾಗಿದ್ದಾರೆ. ಈ ಮೂಲಕ ಸೌತ್ ಆಫ್ರಿಕಾ ತಂಡವನ್ನು ಮೂರು ಬಾರಿ ನೂರಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿದ ವಿಶ್ವದ ಮೊದಲ ತಂಡವೆಂಬ ಹಿರಿಮೆಯನ್ನು ಟೀಮ್ ಇಂಡಿಯಾ ತನ್ನದಾಗಿಸಿಕೊಂಡಿದೆ.