ಮೊಹಮ್ಮದ್ ಶಮಿ ಜೊತೆಗಿರುವ ಟೀಮ್ ಇಂಡಿಯಾದ ಮಾಜಿ ವೇಗಿ ಯಾರೆಂದು ಗುರುತಿಸಬಲ್ಲಿರಾ?
TV9 Web | Updated By: ಝಾಹಿರ್ ಯೂಸುಫ್
Updated on:
Sep 24, 2024 | 8:10 AM
Mohammed Shami: 2023ರ ಏಕದಿನ ವಿಶ್ವಕಪ್ನಲ್ಲಿ ಕರಾರುವಾಕ್ ದಾಳಿ ಮೂಲಕ ಮೊಹಮ್ಮದ್ ಶಮಿ ಸಂಚಲನ ಸೃಷ್ಟಿಸಿದ್ದರು. 7 ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದಿದ್ದ ಶಮಿ ಒಟ್ಟು 24 ವಿಕೆಟ್ ಕಬಳಿಸುವ ಮೂಲಕ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಇದೇ ಟೂರ್ನಿಯ ವೇಳೆ ಪಾದದ ನೋವಿಗೆ ತುತ್ತಾಗಿದ್ದ ಶಮಿ ಆ ಬಳಿಕ ಸರ್ಜರಿ ಮಾಡಿಸಿಕೊಂಡಿದ್ದರು. ಇದೀಗ ಸಂಪೂರ್ಣ ಗುಣಮುಖರಾಗಿರುವ ಅವರು ಫಿಟ್ನೆಸ್ ಕಡೆ ಗಮನ ಹರಿಸಿದ್ದಾರೆ.
1 / 5
ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿರುವ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಸದ್ಯ ಫಿಟ್ನೆಸ್ ಕಸರತ್ತಿನಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕಸರತ್ತಿನ ನಡುವೆ ಶಮಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅದು ಸಹ ಭಾರತ ತಂಡದ ಮಾಜಿ ವೇಗಿಯೊಂದಿಗೆ ಎಂಬುದು ವಿಶೇಷ.
2 / 5
ಆದರೆ ಈ ಫೋಟೋ ನೋಡಿದ ಬಹುತೇಕರಿಗೆ ಶಮಿ ಜೊತೆಗಿರುವ ಮಾಜಿ ಆಟಗಾರ ಯಾರೆಂಬುದು ಗೊತ್ತಾಗಲಿಲ್ಲ. ಏಕೆಂದರೆ ಟೀಮ್ ಇಂಡಿಯಾದ ಮಾಜಿ ವೇಗಿಯ ಸಂಪೂರ್ಣ ಲುಕ್ ಬದಲಾಗಿದೆ. ಅದರಲ್ಲೂ ಭಾರತದ ಪರ ಕಣಕ್ಕಿಳಿದ ಸಂದರ್ಭದಲ್ಲಿ ತೆಳ್ಳಗೆಯಿದ್ದ ಆಟಗಾರ ನಿವೃತ್ತಿಯ ಬಳಿಕ ತಮ್ಮ ಲುಕ್ ಬದಲಿಸಿದ್ದಾರೆ. ಹೀಗಾಗಿಯೇ ಸೋಷಿಯಲ್ ಮೀಡಿಯದಲ್ಲಿ ಶಮಿ ಜೊತೆಗಿರುವ ಆಟಗಾರ ಯಾರೆಂಬುದರ ಚರ್ಚೆ ನಡೆದಿದೆ.
3 / 5
ಇದೀಗ ಈ ಚರ್ಚೆಗೆ ಬ್ರೇಕ್ ಬಿದ್ದಿದ್ದು, ಮೊಹಮ್ಮದ್ ಶಮಿ ಅವರೊಂದಿಗೆ ಕಾಣಿಸಿಕೊಂಡ ಟೀಮ್ ಇಂಡಿಯಾದ ಮಾಜಿ ಆಟಗಾರನ ಹೆಸರು ಅಶೋಕ್ ದಿಂಡಾ. ಭಾರತದ ಪರ 22 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ದಿಂಡಾ 2021 ರಲ್ಲಿ ನಿವೃತ್ತಿ ಘೋಷಿಸಿದ್ದರು. ಇದಾದ ಬಳಿಕ ಅವರು ಎಲ್ಲೂ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಇದೀಗ ಶಮಿ ಹಂಚಿಕೊಂಡಿರುವ ಫೋಟೋ ಮೂಲಕ ಅಶೋಕ್ ದಿಂಡಾ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
4 / 5
ಅಂದಹಾಗೆ ಅಶೋಕ್ ದಿಂಡಾ ಭಾರತದ ಪರ 13 ಏಕದಿನ ಪಂದ್ಯಗಳನ್ನಾಡಿದ್ದು, ಈ ವೇಳೆ 12 ವಿಕೆಟ್ ಕಬಳಿಸಿದ್ದರು. ಇನ್ನು ಟೀಮ್ ಇಂಡಿಯಾ ಪರ 9 ಟಿ20 ಪಂದ್ಯಗಳಲ್ಲೂ ಕಣಕ್ಕಿಳಿದಿದ್ದ ಅವರು 17 ವಿಕೆಟ್ ಕಬಳಿಸುವಲ್ಲಿ ಸಫಲರಾಗಿದ್ದರು. ಅಲ್ಲದೆ 78 ಐಪಿಎಲ್ ಪಂದ್ಯಗಳಿಂದ ಒಟ್ಟು 69 ವಿಕೆಟ್ಗಳನ್ನು ಉರುಳಿಸಿದ್ದಾರೆ. ಇದೀಗ ಕ್ರಿಕೆಟ್ ಬದುಕಿಗೆ ಗುಡ್ ಬೈ ಹೇಳಿರುವ ಅಶೋಕ್ ದಿಂಡಾ ತಮ್ಮ ನಿವೃತ್ತಿ ಬದುಕನ್ನು ಎಂಜಾಯ್ ಮಾಡುತ್ತಿದ್ದಾರೆ.
5 / 5
ಇನ್ನು ಬಾಂಗ್ಲಾದೇಶ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ಅಲಭ್ಯರಾಗಿರುವ ಮೊಹಮ್ಮದ್ ಶಮಿ ಮುಂಬರುವ ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲೂ ಕಾಣಿಸಿಕೊಳ್ಳುವುದು ಅನುಮಾನ. ಏಕೆಂದರೆ ಸಂಪೂರ್ಣ ಫಿಟ್ನೆಸ್ ಸಾಧಿಸದೇ ಮತ್ತೆ ಮೈದಾನಕ್ಕಿಳಿಯುವುದಿಲ್ಲ ಎಂದು ಶಮಿ ತಿಳಿಸಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯೊಂದಿಗೆ ಮೊಹಮ್ಮದ್ ಶಮಿ ಅವರ ಕಂಬ್ಯಾಕ್ ಅನ್ನು ನಿರೀಕ್ಷಿಸಬಹುದು.