
ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿಂದು ಭಾರತ ಒಂದೇ ಒಂದು ಸೋಲು ಕಾಣದೆ ಫೈನಲ್ಗೇರಿದ ಸಾಧನೆ ಮಾಡಿದೆ. ಆಡಿದ ಹತ್ತು ಪಂದ್ಯಗಳ ಪೈಕಿ ಹತ್ತರಲ್ಲೂ ಗೆದ್ದು ಬೀಗಿದೆ. ಬುಧವಾರ ನಡೆದ ನ್ಯೂಝಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 70 ರನ್ಗಳ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತು.

ಭಾರತ ತಂಡ ಲೀಗ್ ಹಂತದಿಂದ ಇಲ್ಲಿಯವರೆಗೆ ನೀಡಿದ ಪ್ರದರ್ಶನ ಅದ್ಭುತವಾಗಿತ್ತು. ರೋಹಿತ್ ಟೀಮ್ ಈ ಪಂದ್ಯಗಳನ್ನೆಲ್ಲ ಗೆದ್ದಿರುವುದು ಕೇವಲ ಅದೃಷ್ಟದಿಂದ ಅಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಿದೆ. ಪ್ರತಿ ಪಂದ್ಯದಲ್ಲಿ ಒಬ್ಬೊಬ್ಬರು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದಾರೆ. ಇದರಲ್ಲಿ ಬಹುಪಾಲು ವಿರಾಟ್ ಕೊಹ್ಲಿಯದ್ದಿದೆ. ಇದಕ್ಕೆ ಕಾರಣ ಕೂಡ ಇದೆ.

ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿಗೆ ಮ್ಯಾನೇಜ್ಮೆಂಟ್ ನೀಡಿರುವುದು ಅಂತಹ ಪ್ರಮುಖ ಜವಾಬ್ದಾರಿ. ಪ್ರತಿ ಪಂದ್ಯದಲ್ಲಿ ಕೊಹ್ಲಿಯ ಆಟ ಗಮನಿಸಿದರೆ ಅವರು ದೊಡ್ಡ ಶಾಟ್ಗೆ ಮುಂದಾದವರಲ್ಲ. ಸಿಕ್ಕ ಅವಕಾಶದಲ್ಲಿ, ಬಂದ ಕಳಪೆ ಚೆಂಡನ್ನು ಬೌಂಡರಿಗೆ ಅಟ್ಟುತ್ತಿದ್ದರು. ಅಷ್ಟಕ್ಕೂ ಕೊಹ್ಲಿಗೆ ನೀಡಿದ ಜವಾಬ್ದಾರಿ ಹಾಗಿತ್ತು.

ವಿರಾಟ್ ಕೊಹ್ಲಿ ಬ್ಯಾಟಿಂಗ್ಗೆ ಬಂದಾಗಿನಿಂದ ಕೊನೆಯ ವರೆಗೆ ಕ್ರೀಸ್ನಲ್ಲಿ ಇರಬೇಕು. ಎಲ್ಲಾದರು ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ ಅತ್ತ ಕೊಹ್ಲಿ ಟೊಂಕ ಕಟ್ಟಿ ನಿಲ್ಲಬೇಕು. ಕೊಹ್ಲಿ ಜೊತೆ ಬಂದು ಹೋಗುವವರು ರನ್ ಗಳಿಸುತ್ತಾ ಸಾಗಬೇಕು. ಇದು ಟೀಮ್ ಇಂಡಿಯಾದ ಮಾಸ್ಟರ್ ಪ್ಲಾನ್. ಅದರಂತೆ ಕೊಹ್ಲಿ ಸಿಂಗಲ್, ಡಬಲ್, ಅವಕಾಶ ಸಿಕ್ಕಾಗ ಫೋರ್, ಸಿಕ್ಸ್ ಸಿಡಿಸುತ್ತಿದ್ದರಷ್ಟೆ.

ಟೀಮ್ ಇಂಡಿಯಾ ತನ್ನ ಯೋಜನೆಯಂತೆ ಇಡೀ ಟೂರ್ನಿಯಲ್ಲಿ ಪ್ರದರ್ಶನ ನೀಡಿದೆ. ಓಪನರ್ಗಳಾದ ರೋಹಿತ್ ಶರ್ಮಾ ಸ್ಫೋಟಕ ಆರಂಭ ಒದಗಿಸುವುದು, ಶುಭ್ಮನ್ ಗಿಲ್ 10 ಓವರ್ಗಳ ನಂತರ ಹೆಚ್ಚು ರನ್ ಬಾರಿಸುವುದು ಒಂದು ಯೋಜನೆಯಾದರೆ, ಶ್ರೇಯಸ್ ಅಯ್ಯರ್ ಬಿಗ್ ಶಾಟ್ಗೆ ಹೆಚ್ಚು ಒತ್ತು ನೀಡಬೇಕು ಎಂಬುದು ಪ್ಲಾನ್ ಆಗಿದೆ.

ಕೆಎಲ್ ರಾಹುಲ್ ಕೂಡ ಆರಂಭದಲ್ಲಿ ನಿಧಾಗತಿಯ ಆಟದ ಮೂಲಕ ನಾನ್ಸ್ಟ್ರೈಕರ್ಗೆ ಆಡಲು ಹೆಚ್ಚು ಅವಕಾಶ ಕೊಡಬೇಕು. ನಂತರ ಕೊನೆಯ ಹಂತದಲ್ಲಿ ಅಬ್ಬರಿಸುವುದು ರಾಹುಲ್ ಸ್ಟ್ರಾಟಜಿ ಆಗಿದೆ. ಬೌಲಿಂಗ್ನಲ್ಲಿ ಬ್ರೇಕ್ ತಂದು ಕೊಡುವ ಹೊಣೆ ಮೊಹಮ್ಮದ್ ಶಮಿ ಮತ್ತು ಜಡೇಜಾಗೆ ನೀಡಲಾಗಿದೆ. ಬುಮ್ರಾ ಹಾಗೂ ಕುಲ್ದೀಪ್ ರನ್ಗೆ ಕಡಿವಾಣ ಹಾಕಬೇಕು. ಇದು ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಮಾಸ್ಟರ್ ಪ್ಲಾನ್ ಆಗಿದೆ.