
ಟೆಸ್ಟ್ ಕ್ರಿಕೆಟ್ ಶುರುವಾಗಿ ಬರೋಬ್ಬರಿ 148 ವರ್ಷಗಳಾಗಿವೆ. ಈ 148 ವರ್ಷಗಳಲ್ಲಿ ಯಾರಿಂದಲೂ ಸಾಧ್ಯವಾಗದ ವಿಶೇಷ ವಿಶ್ವ ದಾಖಲೆಯೊಂದನ್ನು ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ (Temba Bavuma) ನಿರ್ಮಿಸಿದ್ದಾರೆ. ಅದು ಸಹ ಸೋಲಿಲ್ಲದ ಸರದಾರನಾಗಿ ಎಂಬುದು ವಿಶೇಷ.

ಭಾರತದ ವಿರುದ್ಧದ ಟೆಸ್ಟ್ ಸರಣಿಯನ್ನು ಸೌತ್ ಆಫ್ರಿಕಾ ತಂಡವು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದ ಬೆನ್ನಲ್ಲೇ ಸೋಲಿಲ್ಲದ ಸರದಾರನಾಗಿ ಟೆಸ್ಟ್ ಇತಿಹಾಸದಲ್ಲಿ ಅತ್ಯಧಿಕ ಪಂದ್ಯಗಳನ್ನು ಗೆದ್ದ ವಿಶ್ವ ದಾಖಲೆ ಟೆಂಬಾ ಬವುಮಾ ಪಾಲಾಗಿದೆ. ಅಂದರೆ ಟೆಂಬಾ ಬವುಮಾ ನಾಯಕನಾದ ಮೇಲೆ ಸೌತ್ ಆಫ್ರಿಕಾ ತಂಡ ಈವರೆಗೆ ಒಂದೇ ಒಂದು ಟೆಸ್ಟ್ ಪಂದ್ಯ ಸೋತಿಲ್ಲ.

ಹೀಗೆ ಸತತ ಗೆಲುವುಗಳ ಮೂಲಕ ಟೆಸ್ಟ್ ಇತಿಹಾಸದಲ್ಲೇ ಸೋಲಿಲ್ಲದೇ ಅತ್ಯಧಿಕ ಪಂದ್ಯಗಳನ್ನು ಗೆದ್ದ ನಾಯಕನೆಂಬ ವಿಶ್ವ ದಾಖಲೆ ಟೆಂಬಾ ಬವುಮಾ ಪಾಲಾಗಿದೆ. ಇದಕ್ಕೂ ಮುನ್ನ ಇಂತಹದೊಂದು ವಿಶೇಷ ದಾಖಲೆ ಮೈಕ್ ಬ್ರಿಯಾರ್ಲಿ ಹೆಸರಿನಲ್ಲಿತ್ತು.

1977 - 1979 ರ ನಡುವೆ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ ಮೈಕ್ ಬ್ರಿಯಾರ್ಲಿ ಮೊದಲ 15 ಪಂದ್ಯಗಳಲ್ಲಿ 10 ಗೆಲುವು ದಾಖಲಿಸಿದ್ದರು. ಇನ್ನುಳಿದ ಐದು ಪಂದ್ಯಗಳು ಡ್ರಾ ಆಗಿತ್ತು. ಈ ಮೂಲಕ ಟೆಸ್ಟ್ ಇತಿಹಾಸದಲ್ಲಿ ಸೋಲಿಲ್ಲದೆ 10 ಪಂದ್ಯಗಳನ್ನು ಗೆದ್ದ ಏಕೈಕ ನಾಯಕ ಎನಿಸಿಕೊಂಡಿದ್ದರು.

ಇದೀಗ ಈ ದಾಖಲೆಯನ್ನು ಟೆಂಬಾ ಬವುಮಾ ಅಳಿಸಿ ಹಾಕಿದ್ದಾರೆ. 12 ಟೆಸ್ಟ್ ಪಂದ್ಯಗಳಲ್ಲಿ ಸೌತ್ ಆಫ್ರಿಕಾ ತಂಡವನ್ನು ಮುನ್ನಡೆಸಿರುವ ಟೆಂಬಾ ಬವುಮಾ ಒಟ್ಟು 11 ಮ್ಯಾಚ್ಗಳಲ್ಲಿ ಗೆಲುವಿನ ರುಚಿ ನೋಡಿದ್ದಾರೆ. ಇನ್ನು ಒಂದು ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದೆ. ಈ ಮೂಲಕ ಟೆಸ್ಟ್ ಇತಿಹಾಸದಲ್ಲೇ ಸೋಲಿಲ್ಲದೆ ಹತ್ತಕ್ಕಿಂತ ಅಧಿಕ ಪಂದ್ಯಗಳನ್ನು ಗೆದ್ದ ವಿಶ್ವದ ಏಕೈಕ ಕ್ಯಾಪ್ಟನ್ ಎಂಬ ವಿಶ್ವ ದಾಖಲೆಯನ್ನು ಟೆಂಬಾ ಬವುಮಾ ತಮ್ಮದಾಗಿಸಿಕೊಂಡಿದ್ದಾರೆ.
Published On - 8:30 am, Thu, 27 November 25