ಹೊಸ ತಂಡದ ಖರೀದಿಗೆ ಮುಂದಾದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ
The Hundred: ದಿ ಹಂಡ್ರೆಡ್ ಲೀಗ್ ಎಂಬುದು 100 ಎಸೆತಗಳ ಪಂದ್ಯಾವಳಿ. ಅಂದರೆ ಇಲ್ಲಿ ಪ್ರತಿ ಇನಿಂಗ್ಸ್ನಲ್ಲಿ 100 ಎಸೆತಗಳಿರುತ್ತವೆ. ಅಲ್ಲದೆ 5 ಎಸೆತಗಳನ್ನು ಒಂದು ಓವರ್ ಎಂದು ಪರಿಗಣಿಸಲಾಗುತ್ತದೆ. 2021 ರಲ್ಲಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಶುರು ಮಾಡಿದ ಈ ವಿಭಿನ್ನ ಟೂರ್ನಿಯ ತಂಡಗಳ ಷೇರುಗಳನ್ನು ಮಾರಾಟ ಮಾಡಲು ಇಸಿಬಿ ನಿರ್ಧರಿಸಿದೆ.
1 / 5
ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ದಿ ಹಂಡ್ರೆಡ್ ಲೀಗ್ನ ತಂಡಗಳ ಷೇರುಗಳ ಮಾರಾಟಕ್ಕೆ ಮುಂದಾಗಿದೆ. ಈ ಹೂಡಿಕೆ ಸುದ್ದಿ ಬೆನ್ನಲ್ಲೇ ಇಂಡಿಯಾವಿನ್ ಸ್ಪೋರ್ಟ್ಸ್ ಪ್ರೈ. ಲಿಮಿಟೆಡ್ 'ಲಂಡನ್ ಸ್ಪಿರಿಟ್' ತಂಡವನ್ನು ಖರೀದಿಸಲಿದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಅಂದರೆ ದಿ ಹಂಡ್ರೆಡ್ ಲೀಗ್ನಲ್ಲೂ ತಂಡವನ್ನು ಹೊಂದಲು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಆಸಕ್ತಿ ತೋರಿಸಿದೆ.
2 / 5
ಕೆಲ ದಿನಗಳ ಹಿಂದೆಯಷ್ಟೇ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಮ್ಮ ತಂಡಗಳ ಷೇರುಗಳನ್ನು ಖರೀದಿಸುವಂತೆ ಐಪಿಎಲ್ ಮಾಲೀಕರಲ್ಲಿ ಮನವಿ ಮಾಡಿತ್ತು. ಅಲ್ಲದೆ ಈ ತಂಡಗಳ ಷೇರುಗಳ ಖರೀದಿ ಬಳಿಕ ಆಯಾ ತಂಡಗಳ ಹೆಸರನ್ನು ಬದಲಿಸಲು ಅವಕಾಶ ನೀಡುವುದಾಗಿಯೂ ಇಸಿಬಿ ತಿಳಿಸಿದೆ.
3 / 5
ಇದರ ಬೆನ್ನಲ್ಲೇ ಲಂಡನ್ ಸ್ಪಿರಿಟ್ ತಂಡದ ಷೇರನ್ನು ಖರೀದಿಸಲು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ (ಇಂಡಿಯಾವಿನ್ ಸ್ಪೋರ್ಟ್ಸ್ ಪ್ರೈ. ಲಿಮಿಟೆಡ್) ಆಸಕ್ತಿ ತೋರಿಸಿದೆ. ಅಲ್ಲದೆ ಲಂಡನ್ ಸ್ಪಿರಿಟ್ ತಂಡವನ್ನು ಖರೀದಿಸಿದ ಬಳಿಕ ಈ ತಂಡಕ್ಕೆ ಎಂಐ ಲಂಡನ್ ಎಂದು ಹೆಸರಿಡುವ ಸಾಧ್ಯತೆಯಿದೆ.
4 / 5
ಏಕೆಂದರೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಒಡೆತನದಲ್ಲಿರುವ ತಂಡಗಳಿಗೆ MI (ಮುಂಬೈ ಇಂಡಿಯನ್ಸ್) ಟ್ಯಾಗ್ಲೈನ್ನೊಂದಿಗೆ ಹೆಸರಿಡಲಾಗಿದೆ. UAE ಟಿ20 ಲೀಗ್ನಲ್ಲಿ ಎಂಐ ಎಮಿರೇಟ್ಸ್ ಹೆಸರಿನ ತಂಡವಿದ್ದರೆ, ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಎಂಐ ಕೇಪ್ ಟೌನ್ ಹೆಸರಿನಲ್ಲಿ ಕಣಕ್ಕಿಳಿಯುತ್ತಿದೆ. ಹಾಗೆಯೇ ಯುಎಸ್ಎ ಟಿ20 ಲೀಗ್ನಲ್ಲಿ ಎಂಐ ನ್ಯೂಯಾರ್ಕ್ ಹೆಸರಿನ ತಂಡವನ್ನು ಹೊಂದಿದೆ. ಹೀಗಾಗಿ ಲಂಡನ್ ಸ್ಪಿರಿಟ್ ತಂಡವನ್ನು ಖರೀದಿಸಿದರೆ ಅದರ ಹೆಸರು ಎಂಐ ಲಂಡನ್ ಆಗುವ ಸಾಧ್ಯತೆ ಹೆಚ್ಚಿದೆ.
5 / 5
ಮುಂಬೈ ಇಂಡಿಯನ್ಸ್ ಅಲ್ಲದೆ ಐಪಿಎಲ್ನ ಇತರೆ ಫ್ರಾಂಚೈಸಿಗಳಿಗೂ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಬಿಗ್ ಆಫರ್ ನೀಡಿದ್ದು, ಇಸಿಬಿ 8 ತಂಡಗಳ ಶೇ.49 ರಷ್ಟು ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದೆ. ಇದಕ್ಕಾಗಿ ಮುಂದಿನ ತಿಂಗಳು ಬಿಡ್ಡಿಂಗ್ ನಡೆಯುವ ಸಾಧ್ಯತೆಯಿದ್ದು, ಅದರಂತೆ ಐಪಿಎಲ್ನ ಯಾವ ಫ್ರಾಂಚೈಸಿ ದಿ ಹಂಡ್ರೆಡ್ ಲೀಗ್ಗೆ ಕಾಲಿಡಲಿದೆ ಕಾದು ನೋಡಬೇಕಿದೆ.
Published On - 2:30 pm, Sun, 18 August 24