Updated on: Mar 31, 2022 | 8:42 PM
ಐಪಿಎಲ್ನಿಂದ ಒಮ್ಮೆ ಹೊರಬಿದ್ದ ಆಟಗಾರರು ಮತ್ತೆ ಸ್ಥಾನ ಪಡೆದಿರುವ ಅನೇಕ ನಿದರ್ಶನಗಳಿವೆ. ಆದರೆ ಬರೋಬ್ಬರಿ 11 ವರ್ಷಗಳ ಬಳಿಕ ಐಪಿಎಲ್ನಲ್ಲಿ ಮತ್ತೆ ಕಾಣಿಸಿಕೊಂಡು ಇದೀಗ ಹೊಸ ದಾಖಲೆ ನಿರ್ಮಿಸಿದ್ದಾರೆ ಆಸ್ಟ್ರೇಲಿಯಾ ಆಟಗಾರ.
ಹೌದು, ಈ ಬಾರಿ ಗುಜರಾತ್ ಟೈಟನ್ಸ್ ತಂಡದಲ್ಲಿ ಕಾಣಿಸಿಕೊಂಡಿರುವ ಮ್ಯಾಥ್ಯೂ ವೇಡ್ ಐಪಿಎಲ್ ಆಡಿ ಬರೋಬ್ಬರಿ 11 ವರ್ಷಗಳಾಗಿತ್ತು. ಅಂದರೆ ಐಪಿಎಲ್ 2011 ರಲ್ಲಿ ಕೊನೆಯ ಬಾರಿಗೆ ವೇಡ್ ಐಪಿಎಲ್ನಲ್ಲಿ ಅವಕಾಶ ಪಡೆದಿದ್ದರು. ಅಂದು ಡೆಲ್ಲಿ ಡೇರ್ ಡೇವಿಲ್ಸ್ ( ಈಗಿನ ಡೆಲ್ಲಿ ಕ್ಯಾಪಿಟಲ್ಸ್) ತಂಡದಲ್ಲಿ ಕಾಣಿಸಿಕೊಂಡಿದ್ದ ವೇಡ್ಗೆ ಅದಾದ ಬಳಿಕ ಅವಕಾಶ ಸಿಕ್ಕಿರಲಿಲ್ಲ.
ಆದರೆ ಕಳೆದ ವರ್ಷ ನಡೆದ ಟಿ20 ವಿಶ್ವಕಪ್ನಲ್ಲಿ ಪಾಕ್ ವೇಗಿ ಶಾಹಿನ್ ಅಫ್ರಿದಿಯ ಒಂದೇ ಓವರ್ನಲ್ಲಿ 3 ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಮ್ಯಾಥ್ಯೂ ವೇಡ್ ಅಬ್ಬರಿಸಿದ್ದರು. ಈ ಸ್ಪೋಟಕ ಬ್ಯಾಟಿಂಗ್ ಮೂಲಕ ಫ್ರಾಂಚೈಸಿಗಳ ಗಮನ ಸೆಳೆದಿದ್ದ ವೇಡ್ ಅವರನ್ನು ಈ ಬಾರಿ ಗುಜರಾತ್ ಟೈಟನ್ಸ್ ತಂಡವು ಖರೀದಿಸಿತ್ತು.
ಅದರಂತೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದದ ಪಂದ್ಯದಲ್ಲಿ ವೇಡ್ ಗುಜರಾತ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಇದರೊಂದಿಗೆ ಬರೋಬ್ಬರಿ 3964 ದಿನಗಳ ಬಳಿಕ ಮತ್ತೊಮ್ಮೆ ಐಪಿಎಲ್ನಲ್ಲಿ ಕಣಕ್ಕಿಳಿಯುವ ಮೂಲಕ ಮಾಥ್ಯೂ ವೇಡ್ ಹೊಸ ದಾಖಲೆ ಬರೆದರು.
ಇದಕ್ಕೂ ಮುನ್ನ ದೀರ್ಘಾವಧಿಯ ಬಳಿಕ ಐಪಿಎಲ್ನಲ್ಲಿ ಕಾಣಿಸಿಕೊಂಡ ದಾಖಲೆ ಸೌತ್ ಆಫ್ರಿಕಾ ಕ್ರಿಕೆಟಿಗ ಕಾಲಿನ್ ಇನ್ಗ್ರಾಮ್ ಹೆಸರಿನಲ್ಲಿತ್ತು. ಇನ್ಗ್ರಾಮ್ 2011 ರಲ್ಲಿ ಡೆಲ್ಲಿ ಪರ ಆಡಿದ್ದರು. ಇದಾದ ಬಳಿಕ ಅವರು ಮತ್ತೆ ಮುಂಬೈ ಇಂಡಿಯನ್ಸ್ ತಂಡದಲ್ಲಿ 2019 ರಲ್ಲಿ ಕಾಣಿಸಿಕೊಂಡಿದ್ದರು. ಅಂದರೆ 2864 ದಿನಗಳ ಬಳಿಕ ಕಾಲಿನ್ ಇನ್ಗ್ರಾಮ್ ಐಪಿಎಲ್ ಆಡಿದ್ದರು.
ಇದೀಗ ಈ ದಾಖಲೆ ಮುರಿದು ಮ್ಯಾಥ್ಯೂ ವೇಡ್ 3964 ದಿನಗಳ ಬಳಿಕ ಮತ್ತೊಮ್ಮೆ ಐಪಿಎಲ್ನಲ್ಲಿ ಕಣಕ್ಕಿಳಿಯುವ ಹೊಸ ಇತಿಹಾಸ ನಿರ್ಮಿಸಿದ್ದಾರೆ.