
ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಅದು ಕೂಡ ಆರ್ಸಿಬಿ ದಾಂಡಿಗ ಟಿಮ್ ಡೇವಿಡ್ (Tim David) ಬ್ಯಾಟ್ನಿಂದ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ (IPL 2025) 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪಂಜಾಬ್ ಕಿಂಗ್ಸ್ (PBKS) ತಂಡಗಳು ಮುಖಾಮುಖಿಯಾಗಿತ್ತು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಅಲ್ಲದೆ ಕೇವಲ 41 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟಿಮ್ ಡೇವಿಡ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

ಆರಂಭದಲ್ಲಿ ರಕ್ಷಣಾತ್ಮಕವಾಗಿ ಬ್ಯಾಟ್ ಬೀಸಿದ ಟಿಮ್ ಡೇವಿಡ್ ಕೊನೆಯ 2 ಓವರ್ಗಳಿರುವಾಗ ಸಿಡಿಲಬ್ಬರ ಶುರು ಮಾಡಿದರು. ಪರಿಣಾಮ 26 ಎಸೆತಗಳಲ್ಲಿ ಡೇವಿಡ್ ಬ್ಯಾಟ್ನಿಂದ 50 ರನ್ಗಳು ಮೂಡಿಬಂತು. ಈ ಅರ್ಧಶತಕದೊಂದಿಗೆ ಟಿಮ್ ಡೇವಿಡ್ ಟಿ20 ಕ್ರಿಕೆಟ್ನಲ್ಲಿ ವಿಶೇಷ ದಾಖಲೆ ಬರೆದರು.

ಅಂದರೆ ಪ್ರಥಮ ಇನಿಂಗ್ಸ್ನಲ್ಲಿ ತಂಡವೊಂದು 100 ಕ್ಕಿಂತ ಕಡಿಮೆ ಸ್ಕೋರ್ಗಳಿಸಿದರೂ ಬ್ಯಾಟರ್ ಒಬ್ಬರು ಅರ್ಧಶತಕ ಬಾರಿಸಿದ್ದು ಇದೇ ಮೊದಲು. ಈ ಪಂದ್ಯದಲ್ಲಿ ಆರ್ಸಿಬಿ ಕಲೆಹಾಕಿದ್ದು 95 ರನ್ಗಳು. ಇದರಲ್ಲಿ ಟಿಮ್ ಡೇವಿಡ್ ಕೊಡುಗೆ 50 ರನ್ಗಳು. ಈ ಮೂಲಕ ಟಿ20 ಕ್ರಿಕೆಟ್ನ ಪ್ರಥಮ ಇನಿಂಗ್ಸ್ನಲ್ಲಿ 100ಕ್ಕಿಂತ ಕಡಿಮೆ ಸ್ಕೋರ್ಗಳಿಸಿದ ತಂಡದ ಪರ ಅರ್ಧಶತಕ ಬಾರಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ಟಿಮ್ ಡೇವಿಡ್ ನಿರ್ಮಿಸಿದ್ದಾರೆ.

ಇದಕ್ಕೂ ಮುನ್ನ ಇಂತಹೊಂದು ದಾಖಲೆಯನ್ನು ವಿರಾಟ್ ಕೊಹ್ಲಿ ಬರೆದಿದ್ದರು. 2013 ರಲ್ಲಿ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 106 ರನ್ ಕಲೆಹಾಕಿತ್ತು. ಈ ವೇಳೆ ಕಿಂಗ್ ಕೊಹ್ಲಿ 56 ರನ್ ಬಾರಿಸಿದ್ದರು. ಈ ಮೂಲಕ ಐಪಿಎಲ್ನ ಪ್ರಥಮ ಇನಿಂಗ್ಸ್ನಲ್ಲಿ ಕನಿಷ್ಠ ಸ್ಕೋರ್ಗಳಿಕೆಯ ನಡುವೆ ಅರ್ಧಶತಕ ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಕೊಹ್ಲಿ ತಮ್ಮದಾಗಿಸಿಕೊಂಢಿದ್ದರು.

ಇದೀಗ ಈ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸುವಲ್ಲಿ ಟಿಮ್ ಡೇವಿಡ್ ಯಶಸ್ವಿಯಾಗಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅಜೇಯ 50 ರನ್ ಸಿಡಿಸಿ, ಪ್ರಥಮ ಇನಿಂಗ್ಸ್ನಲ್ಲಿ 100 ಕ್ಕಿಂತ ಕಡಿಮೆ ಸ್ಕೋರ್ ದಾಖಲಾದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಢಿದ್ದಾರೆ.