
ಕ್ರೈಸ್ಟ್ಚರ್ಚ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ನ್ಯೂಝಿಲೆಂಡ್ ವೇಗದ ಬೌಲರ್ ಟಿಮ್ ಸೌಥಿ (Tim Southee) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ವಿರಾಟ್ ಕೊಹ್ಲಿ (Virat Kohli), ಡೇವಿಡ್ ವಾರ್ನರ್ ಹಾಗೂ ರಾಸ್ ಟೇಲರ್ ಹೆಸರಿನಲ್ಲಿದ್ಧ ವಿಶ್ವ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.

ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಟಿಮ್ ಸೌಥಿ ಟೆಸ್ಟ್ ಕ್ರಿಕೆಟ್ನಲ್ಲಿ 100 ಪಂದ್ಯಗಳನ್ನಾಡಿದ ವಿಶೇಷ ಸಾಧನೆ ಮಾಡಿದ್ದಾರೆ. ಇದರ ಜೊತೆಗೆ ಮೂರು ಸ್ವರೂಪಗಳಲ್ಲೂ 100 ಪಂದ್ಯಗಳನ್ನಾಡಿರುವ ವಿಶ್ವದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ, ನ್ಯೂಝಿಲೆಂಡ್ನ ರಾಸ್ ಟೇಲರ್ ಮತ್ತು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಮಾತ್ರ ಈ ಸಾಧನೆ ಮಾಡಿದ್ದರು. ಇದೀಗ ಈ ಪಟ್ಟಿಗೆ 4ನೇ ಆಟಗಾರನಾಗಿ ಡೇವಿಡ್ ವಾರ್ನರ್ ಎಂಟ್ರಿ ಕೊಟ್ಟಿದ್ದಾರೆ.

ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೂ ಟಿಮ್ ಸೌಥಿ ಪಾತ್ರರಾಗಿದ್ದಾರೆ. ಹಾಗೆಯೇ ಈ ದಾಖಲೆ ಬರೆದ 3ನೇ ಸಕ್ರಿಯ ಆಟಗಾರ ಎನಿಸಿಕೊಂಡಿದ್ದಾರೆ.

ಅಂದರೆ ಪ್ರಸ್ತುತ ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ, ಡೇವಿಡ್ ವಾರ್ನರ್ ಮಾತ್ರ ಮೂರು ಸ್ವರೂಪಗಳಲ್ಲೂ 100ಕ್ಕಿಂತ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಇದೀಗ ಟಿಮ್ ಸೌಥಿ ಕೂಡ ಈ ಸಾಧನೆ ಮಾಡುವ ಮೂಲಕ ಕಿಂಗ್ ಕೊಹ್ಲಿ, ವಾರ್ನರ್ ಹೆಸರಿನಲ್ಲಿರುವ ವಿಶೇಷ ದಾಖಲೆಯನ್ನು ಸರಿಗಟ್ಟಿದ್ದಾರೆ.