Updated on: Jun 20, 2023 | 7:24 PM
TNPL 2023: ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ಯುವ ಎಡಗೈ ದಾಂಡಿಗ ಸಾಯಿ ಸುದರ್ಶನ್ ಅವರ ಅಬ್ಬರ ಮುಂದುವರೆದಿದೆ. ಟಿಎನ್ಪಿಎಲ್ನ 9ನೇ ಪಂದ್ಯದಲ್ಲಿ ಲೈಕಾ ಕೋವೈ ಕಿಂಗ್ಸ್ ಹಾಗೂ ಚೆಪಾಕ್ ಸೂಪರ್ ಗಿಲ್ಲಿಸ್ ಮುಖಾಮುಖಿಯಾಗಿತ್ತು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಕೋವೈ ತಂಡದ ನಾಯಕ ಶಾರೂಖ್ ಖಾನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಚೆಪಾಕ್ ಸೂಪರ್ ಗಿಲ್ಲಿಸ್ ತಂಡದ ಬ್ಯಾಟರ್ಗಳು ಲೈಕಾ ಕೋವೈ ಕಿಂಗ್ಸ್ ಬೌಲರ್ಗಳ ಮುಂದೆ ರನ್ಗಳಿಸಲು ಪರದಾಡಿದರು. ಅಲ್ಲದೆ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 126 ರನ್ಗಳಿಂದ ಇನಿಂಗ್ಸ್ ಅಂತ್ಯಗೊಳಿಸಿತು.
127 ರನ್ಗಳ ಸುಲಭ ಗುರಿ ಬೆನ್ನತ್ತಿದ ಲೈಕಾ ಕೋವೈ ಕಿಂಗ್ಸ್ ತಂಡಕ್ಕೆ ಆರಂಭಿಕರಾದ ಸಚಿನ್ (14) ಹಾಗೂ ಸುರೇಶ್ ಕುಮಾರ್ (47) ಉತ್ತಮ ಆರಂಭ ಒದಗಿಸಿದ್ದರು. ಆ ಬಳಿಕ ಕ್ರೀಸ್ಗಿಳಿದ ಸಾಯಿ ಸುದರ್ಶನ್ ಮತ್ತೊಮ್ಮೆ ಬಿರುಸಿನ ಬ್ಯಾಟಿಂಗ್ನೊಂದಿಗೆ ಗಮನ ಸೆಳೆದರು.
ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಸಾಯಿ ಸುದರ್ಶನ್ 43 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 9 ಫೋರ್ನೊಂದಿಗೆ ಅಜೇಯ 64 ರನ್ ಬಾರಿಸಿದರು. ಇದರೊಂದಿಗೆ ಲೈಕಾ ಕೋವೈ ಕಿಂಗ್ಸ್ ತಂಡವು 16.3 ಓವರ್ಗಳಲ್ಲಿ 128 ರನ್ ಬಾರಿಸಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ವಿಶೇಷ ಎಂದರೆ ಇದು ಸಾಯಿ ಸುದರ್ಶನ್ ಅವರ ಸತತ 3ನೇ ಅರ್ಧಶತಕವಾಗಿದೆ. ಐಪಿಎಲ್ ಫೈನಲ್ನಲ್ಲಿ ಸಿಎಸ್ಕೆ ವಿರುದ್ಧ 96 ರನ್ ಸಿಡಿಸಿ ಅಬ್ಬರಿಸಿದ್ದ ಸಾಯಿ ಇದೀಗ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲೂ ತಮ್ಮ ಫಾರ್ಮ್ ಮುಂದುವರೆಸಿದ್ದಾರೆ.
ಈ ಬಾರಿಯ ಟಿಎನ್ಪಿಎಲ್ನ ಮೊದಲ ಪಂದ್ಯದಲ್ಲಿ ಐಡ್ರೀಮ್ ತಿರುಪ್ಪೂರ್ ತಮಿಳನ್ಸ್ ವಿರುದ್ಧ ಸಾಯಿ ಸುದರ್ಶನ್ ಕೇವಲ 45 ಎಸೆತಗಳಲ್ಲಿ 86 ರನ್ ಬಾರಿಸಿದ್ದರು. ಇನ್ನು ನೆಲ್ಲೈ ರಾಯಲ್ ಕಿಂಗ್ಸ್ ವಿರುದ್ಧದ 2ನೇ ಪಂದ್ಯದಲ್ಲಿ 52 ಎಸೆತಗಳಲ್ಲಿ 90 ರನ್ ಚಚ್ಚಿದ್ದರು.
ಇದೀಗ ಚೆಪಾಕ್ ಸೂಪರ್ ಗಿಲ್ಲಿಸ್ 43 ಎಸೆತಗಳಲ್ಲಿ ಅಜೇಯ 64 ರನ್ ಬಾರಿಸುವ ಮೂಲಕ ಸಾಯಿ ಸುದರ್ಶನ್ ಹ್ಯಾಟ್ರಿಕ್ ಅರ್ಧಶತಕದ ಸಾಧನೆ ಮಾಡಿದ್ದಾರೆ. ಈ ಮೂಲಕ 21ರ ಯುವ ಎಡಗೈ ದಾಂಡಿಗ ತಮ್ಮ ಭರ್ಜರಿ ಫಾರ್ಮ್ ಮುಂದುವರೆಸಿದ್ದಾರೆ.