
ಜನವರಿ 14 ರಂದು ದಕ್ಷಿಣ ಆಫ್ರಿಕಾದಲ್ಲಿ ಆರಂಭವಾಗಿರುವ ಅಂಡರ್-19 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿಯೇ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸುವುದರೊಂದಿಗೆ ಬಾಂಗ್ಲಾದೇಶ ತಂಡ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಇದರೊಂದಿಗೆ ಟೂರ್ನಿಯ ಮೊದಲ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ.

ಬೆನೋನಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯ ಅಂಡರ್-19 ತಂಡ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 130 ರನ್ ಗಳಿಸಲಷ್ಟೇ ಶಕ್ತವಾಯಿತು.

ಆಸ್ಟ್ರೇಲಿಯಾ ಪರ ಕ್ಲೇರ್ ಮೂರ್ 51 ಎಸೆತಗಳಲ್ಲಿ ಗರಿಷ್ಠ 52 ರನ್ ಗಳಿಸಿದರು. ಕೊನೆಯಲ್ಲಿ ನಾಯಕಿ ರೀಸ್ ಮೆಕೆನ್ನಾ ಮತ್ತು ಆಮಿ ಸ್ಮಿತ್ ವೇಗವಾಗಿ ರನ್ ಸೇರಿಸುವ ಮೂಲಕ ತಂಡವನ್ನು ಈ ಸ್ಕೋರ್ಗೆ ಕೊಂಡೊಯ್ದರು.

ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶ ತಂಡ 18ನೇ ಓವರ್‌ನಲ್ಲಿಯೇ 7 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಇದು ಯಾವುದೇ ಮಟ್ಟದ ಐಸಿಸಿ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶದ ಮೊದಲ ಜಯವಾಗಿದೆ ಎಂಬುದು ಇಲ್ಲಿ ವಿಶೇಷ ಸಂಗತಿಯಾಗಿದೆ.

ತಂಡದ ಪರ ದಿಲಾರಾ ಅಕ್ತರ್ ಗರಿಷ್ಠ 40 ರನ್ (42 ಎಸೆತ) ಗಳಿಸಿದರೆ, ಶೋರ್ನಾ ಅಕ್ತರ್ (23) ಮತ್ತು ಸುಮೈಯಾ ಅಕ್ತರ್ (31) ತ್ವರಿತವಾಗಿ ರನ್ ಗಳಿಸುವುದರೊಂದಿಗೆ ತಂಡವನ್ನು ಗುರಿ ತಲುಪಿಸುವ ಕೆಲಸ ಮಾಡಿದರು. ಇವರಿಬ್ಬರ ನಡುವೆ 42 ಎಸೆತಗಳಲ್ಲಿ 61 ರನ್ ಜೊತೆಯಾಟವಿತ್ತು.
Published On - 5:46 pm, Sat, 14 January 23