
ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಒಲಿ ಪೋಪ್ ನೇತೃತ್ವದ ಇಂಗ್ಲೆಂಡ್ ಕ್ರಿಕೆಟ್ ತಂಡ ಎಂಟು ವಿಕೆಟ್‌ಗಳಿಂದ ಸೋಲು ಅನುಭವಿಸಿದೆ. ಲಂಡನ್‌ನ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸೋತಿರುವ ಇಂಗ್ಲೆಂಡ್ ತಂಡ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್ನಿಂದ ಹೊರಗುಳಿಯುವ ಆತಂಕದಲ್ಲಿದೆ.

ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡ, ಶ್ರೀಲಂಕಾವನ್ನು ಸುಲಭವಾಗಿ ಸೋಲಿಸಿತ್ತು. ಆ ಬಳಿಕ ಇಂಗ್ಲೆಂಡ್ ತಂಡದ ಗೆಲುವಿನ ಶೇಕಡಾವಾರು 45 ಆಗಿತ್ತು. ಇದರ ಜೊತೆಗೆ ಪಾಯಿಂಟ್ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡ ಟಾಪ್ 5ಕ್ಕೆ ಎಂಟ್ರಿಕೊಟ್ಟಿತ್ತು.

ಆದರೆ ಉಭಯ ತಂಡಗಳ ನಡುವೆ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಸೋತಿರುವ ಇಂಗ್ಲೆಂಡ್ ತಂಡದ ಗೆಲುವಿನ ಶೇಕಡಾವಾರು ಇದೀಗ 42.19 ಆಗಿದೆ. ಅಲ್ಲದೆ ತಂಡವು ರ್ಯಾಂಕಿಂಗ್‌ನಲ್ಲಿ ಆರನೇ ಸ್ಥಾನಕ್ಕೆ ಜಾರಿದೆ.

ಇನ್ನು ಅಂತಿಮ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿರುವ ಶ್ರೀಲಂಕಾ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ತಲುಪಿದೆ. ಮೂರನೇ ಪಂದ್ಯಕ್ಕೂ ಮುನ್ನ ಶ್ರೀಲಂಕಾದ ಪಿಸಿಟಿ 33.33 ಇದ್ದು, ಈಗ 42.85ಕ್ಕೆ ಏರಿಕೆಯಾಗಿದೆ. ಈ ಮೊದಲು ಏಳನೇ ಸ್ಥಾನದಲ್ಲಿದ್ದ ತಂಡ ಇದೀಗ ಇಂಗ್ಲೆಂಡ್ ತಂಡವನ್ನು ಮಣಿಸಿ ಅಗ್ರ 5ರೊಳಗೆ ಸ್ಥಾನ ಪಡೆದುಕೊಂಡಿದೆ.

ಉಳಿದಂತೆ ಟೀಂ ಇಂಡಿಯಾದ ಸ್ಥಾನ ಬಲಿಷ್ಠವಾಗಿದ್ದು, ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತದ PCT ಗರಿಷ್ಠ 68.52 ಆಗಿದೆ. ಈ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ ತಂಡವು ಎರಡನೇ ಸ್ಥಾನದಲ್ಲಿದ್ದು, ಈ ಎರಡು ತಂಡಗಳ ನಂತರ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳು ಸ್ಥಾನ ಪಡೆದಿವೆ.