IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ ಅತ್ಯಂತ ಕಿರಿಯ ಆಟಗಾರ ವೈಭವ್ ಸೂರ್ಯವಂಶಿ 14ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. 2011, ಮಾರ್ಚ್ 27 ರಂದು ಬಿಹಾರದಲ್ಲಿ ಜನಿಸಿದ ವೈಭವ್ ಅವರನ್ನು ಈ ಬಾರಿಯ ಐಪಿಎಲ್ ಮೆಗಾ ಹರಾಜಿನ ಮೂಲಕ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ 1.10 ಕೋಟಿ ರೂ.ಗೆ ಖರೀದಿಸಿತು. ಈ ಮೂಲಕ ಐಪಿಎಲ್ಗೆ ಆಯ್ಕೆಯಾದ ಅತ್ಯಂತ ಕಿರಿಯ ಆಟಗಾರನೆಂಬ ದಾಖಲೆ ಬರೆದಿದ್ದರು.
ಇದಕ್ಕೂ ಮುನ್ನ ಈ ದಾಖಲೆ ಪ್ರಯಾಸ್ ರೇ ಬರ್ಮನ್ ಹೆಸರಿನಲ್ಲಿತ್ತು. ಐಪಿಎಲ್ 2019 ರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಪ್ರಯಾಸ್ ಅವರನ್ನು 1.5 ಕೋಟಿ ರೂ. ಖರೀದಿಸಿದ್ದರು. ಈ ವೇಳೆ ಅವರ ವಯಸ್ಸು 16 ವರ್ಷ. ಈ ಮೂಲಕ ಐಪಿಎಲ್ ಇತಿಹಾಸದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಪ್ರಯಾಸ್ ನಿರ್ಮಿಸಿದ್ದರು.
ಆದರೆ 13ನೇ ವಯಸ್ಸಿನಲ್ಲಿ ಐಪಿಎಲ್ಗೆ ಎಂಟ್ರಿ ಕೊಡುವ ಮೂಲಕ ವೈಭವ್ ಸೂರ್ಯವಂಶಿ ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದರು. ಅಲ್ಲದೆ ಇದೀಗ ಐಪಿಎಲ್ ನಡುವೆ ತಮ್ಮ 14ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಮೂಲಕ ಯುವ ದಾಂಡಿಗ ಮತ್ತೊಂದು ವಸಂತಕ್ಕೆ ಕಾಲಿಟ್ಟಿದ್ದಾರೆ.
ಇನ್ನು ಈ ಬಾರಿಯ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದರೆ ಟಿ20 ಇತಿಹಾಸದಲ್ಲೇ ಸ್ಪರ್ಧಾತ್ಮಕ ಟೂರ್ನಿ ಆಡಿದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಆದರೆ ಮೊದಲ ಎರಡು ಪಂದ್ಯಗಳಲ್ಲಿ ಬೆಂಚ್ ಕಾದಿರುವ ಎಡಗೈ ದಾಂಡಿಗನಿಗೆ ಮುಂದಿನ ಪಂದ್ಯಗಳಲ್ಲಿ ಚಾನ್ಸ್ ಸಿಗಲಿದೆಯಾ ಕಾದು ನೋಡಬೇಕಿದೆ.
ಇನ್ನು ವೈಭವ್ ಸೂರ್ಯವಂಶಿ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಯುವ ದಾಂಡಿಗ 2023 ರಲ್ಲಿ ರಣಜಿ ಟೂರ್ನಿಗೆ ಪಾದಾರ್ಪಣೆ ಮಾಡಿದ್ದಾರೆ. ಅಲ್ಲದೆ ಬಿಹಾರ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ರಣಧೀರ್ ವರ್ಮಾ ಅಂಡರ್ 19 ಏಕದಿನ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ತ್ರಿಶತಕ ಸಿಡಿಸಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡಿದ್ದರು.
ಹಾಗೆಯೇ ಕಳೆದ ತಿಂಗಳು ಆಸ್ಟ್ರೇಲಿಯಾದ ಅಂಡರ್-19 ತಂಡದ ವಿರುದ್ಧ 64 ಎಸೆತಗಳಲ್ಲಿ 104 ರನ್ ಬಾರಿಸಿ ಮಿಂಚಿದ್ದರು. ಈ ವೇಳೆ ಅವರು ಕೇವಲ 58 ಎಸೆತಗಳಲ್ಲಿ ಶತಕ ಪೂರೈಸಿ, ಅಂಡರ್-19 ಟೆಸ್ಟ್‌ನಲ್ಲಿ ಅತಿ ವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಇದೀಗ ಐಪಿಎಲ್ ಅಂಗಳದಲ್ಲಿರುವ 14 ವರ್ಷದ ವೈಭವ್ ಚೊಚ್ಚಲ ಅವಕಾಶವನ್ನು ಎದುರು ನೋಡುತ್ತಿದ್ದಾರೆ.