
ಕ್ರಿಕೆಟ್ ಅಂಗಳದಲ್ಲಿ ವೈಭವ್ ಸೂರ್ಯವಂಶಿಯ (Vaibhav Suryavanshi) ಪರಾಕ್ರಮ ಮುಂದುವರೆದಿದೆ. ಈವರೆಗೆ ಟಿ20 ಕ್ರಿಕೆಟ್ನಲ್ಲಿ ಅಬ್ಬರಿಸುತ್ತಿದ್ದ ವೈಭವ್ ಇದೀಗ ಏಕದಿನ ಟೂರ್ನಿಯಲ್ಲೂ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಸಿಡಿಲಬ್ಬರದೊಂದಿಗೆ ಹಲವು ದಾಖಲೆಗಳನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...

ಅತಿ ಕಿರಿಯ ಶತಕಧಾರಿ: ಅರುಣಾಚಲ ಪ್ರದೇಶ್ ವಿರುದ್ಧದ ಪಂದ್ಯದಲ್ಲಿ 190 ರನ್ ಸಿಡಿಸುವ ಮೂಲಕ 14 ವರ್ಷದ ವೈಭವ್ ಸೂರ್ಯವಂಶಿ ಪುರುಷರ ಲಿಸ್ಟ್ ಎ (ಏಕದಿನ) ಕ್ರಿಕೆಟ್ನಲ್ಲಿ ಸೆಂಚುರಿ ಬಾರಿಸಿದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

ಅತಿ ವೇಗದ 150 ರನ್: ವಿಜಯ ಹಝಾರೆ ಟೂರ್ನಿಯ ಮೊದಲ ಪಂದ್ಯದಲ್ಲಿ ಅರುಣಾಚಲ ಪ್ರದೇಶ್ ವಿರುದ್ಧ ಕೇವಲ 54 ಎಸೆತಗಳಲ್ಲಿ 150 ರನ್ ಪೂರೈಸಿ ಅತೀ ಕಡಿಮೆ ಎಸೆತದಲ್ಲಿ 150 ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಮೂಲಕ ಎಬಿ ಡಿವಿಲಿಯರ್ಸ್ (64 ಎಸೆತ) ಅವರ ಹೆಸರಲ್ಲಿದ್ದ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.

4ನೇ ವೇಗದ ಶತಕ: ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 36 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ಮೂಲಕ ಅನ್ಮೋಲ್ ಪ್ರೀತ್, ಕೋರೆ ಅ್ಯಂಡರ್ಸನ್ ಹಾಗೂ ಗ್ರಹಾಂ ರೋಸ್ ಬಳಿಕ ಅತ್ಯಂತ ವೇಗದ ಲಿಸ್ಟ್ ಎ ಶತಕ ಬಾರಿಸಿದ ವಿಶ್ವದ ನಾಲ್ಕನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

2ನೇ ವೇಗದ ಸೆಂಚುರಿ: ಲಿಸ್ಟ್ ಎ ಕ್ರಿಕೆಟ್ನಲ್ಲಿ ಅತೀ ಕಡಿಮೆ ಎಸೆತಗಳಲ್ಲಿ ಶತಕ ಬಾರಿಸಿದ ಎರಡನೇ ಭಾರತೀಯ ದಾಂಡಿಗ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ 35 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ ಅನ್ಮೋಲ್ ಪ್ರೀತ್ ಸಿಂಗ್ ಮೊದಲ ಸ್ಥಾನದಲ್ಲಿದ್ದಾರೆ.

ಸಿಕ್ಸರ್‌ಗಳ ದಾಖಲೆ: ಅರುಣಾಚಲ ಪ್ರದೇಶ್ ವಿರುದ್ಧದ ಪಂದ್ಯದಲ್ಲಿ 15 ಸಿಕ್ಸ್ ಸಿಡಿಸುವ ಮೂಲಕ ವಿಜಯ ಹಝಾರೆ ಟೂರ್ನಿಯ ಪಂದ್ಯವೊಂದರ ಇನಿಂಗ್ಸ್ನಲ್ಲಿ 15 ಸಿಕ್ಸ್ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನೂ ಕೂಡ ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ.