
ಭಾರತೀಯ ಕ್ರಿಕೆಟ್ನ ಹೊಸ ಸೆನ್ಸೇಷನ್ ವೈಭವ್ ಸೂರ್ಯವಂಶಿಯ (Vaibhav suryavanshi) ಸಿಡಿಲಬ್ಬರ ಮುಂದುವರೆದಿದೆ. ಈ ಬಾರಿ ಸಿಡಿದಿರುವುದು ಅಂಡರ್-19 ಏಕದಿನ ಪಂದ್ಯದಲ್ಲಿ ಎಂಬುದಷ್ಟೇ ವ್ಯತ್ಯಾಸ. ಅದು ಕೂಡ ಕೇವಲ 24 ಎಸೆತಗಳಲ್ಲಿ 10 ಸಿಕ್ಸರ್ ಸಿಡಿಸುವ ಮೂಲಕ ಎಂಬುದೇ ವಿಶೇಷ.

ಸೌತ್ ಆಫ್ರಿಕಾ ಅಂಡರ್-19 ತಂಡದ ವಿರುದ್ಧ ಯೂತ್ ಒಡಿಐ ಸರಣಿಯ ಎರಡನೇ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು 49.3 ಓವರ್ಗಳಲ್ಲಿ 245 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್ನಿಂದಲೇ ಅಬ್ಬರಿಲಾರಂಭಿಸಿದ ಯುವ ದಾಂಡಿಗ 5 ಓವರ್ಗಳ ಒಳಗೆಯೇ 6 ಸಿಕ್ಸರ್ ಸಿಡಿಸಿದ್ದರು.

ಈ ಸಿಕ್ಸರ್ಗಳೊಂದಿಗೆ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದಾದ ಬಳಿಕ ಕೂಡ ಸಿಕ್ಸರ್ಗಳ ಸುರಿಮಳೆಗೈದ ವೈಭವ್ ಸೂರ್ಯವಂಶಿ ಕೇವಲ 24 ಎಸೆತಗಳಲ್ಲಿ 10 ಭರ್ಜರಿ ಸಿಕ್ಸ್ ಹಾಗೂ 1 ಆಕರ್ಷಕ ಫೋರ್ನೊಂದಿಗೆ 68 ರನ್ ಬಾರಿಸಿ ಔಟಾದರು.

ವೈಭವ್ ಸೂರ್ಯವಂಶಿಯ ಈ ಸಿಡಿಲಬ್ಬರದ ನೆರವಿನೊಂದಿಗೆ ಭಾರತ ತಂಡವು 8 ಓವರ್ಗಳಲ್ಲಿ 95 ರನ್ ಕಲೆಹಾಕಿತು. ಇದಾದ ಬಳಿಕ ಅಭಿಮನ್ಯು ಕುಂದು 42 ಎಸೆತಗಳಲ್ಲಿ 48 ರನ್ ಬಾರಿಸಿದರು. ಈ ಮೂಲಕ ಭಾರತ ತಂಡವು 23.2 ಓವರ್ಗಳಲ್ಲಿ 176 ರನ್ ಗಳಿಸಿತ್ತು. ಈ ವೇಳೆ ವೇಳೆ ಮಂದ ಬೆಳಕಿನ ಕಾರಣ ಪಂದ್ಯವನ್ನು ಕೆಲ ಕಾಲ ಸ್ಥಗಿತಗೊಳಿಸಲಾಯಿತು. ಅಷ್ಟೇ ಅಲ್ಲದೆ ಪಂದ್ಯದ ಫಲಿತಾಂಶ ನಿರ್ಣಯಕ್ಕಾಗಿ ಡಕ್ವರ್ತ್ ಲೂಯಿಸ್ ನಿಯಮದ ಮೊರೆ ಹೋಗಲಾಗಿದ್ದು, ಈ ವೇಳೆಗೆ ಭಾರತ ತಂಡವು 23.2 ಓವರ್ಗಳಲ್ಲಿ 176 ರನ್ಗಳಿಸಿ ನಿಗದಿತ ಗುರಿಗಿಂತ ಮುಂದಿದ್ದರಿಂದ ಟೀಮ್ ಇಂಡಿಯಾವನ್ನು 8 ವಿಕೆಟ್ಗಳ ವಿಜಯಿ ಎಂದು ಘೋಷಿಸಲಾಯಿತು.