ಅಬ್ಬರ ಸಿಡಿಲಬ್ಬರ… ಟ್ರಾವಿಸ್ ಹೆಡ್ ಬ್ಯಾಟ್ನಿಂದ ದಾಖಲೆಯ ಸೆಂಚುರಿ
Australia vs England, 5th Test: ಆ್ಯಶಸ್ ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು ಪ್ರಥಮ ಇನಿಂಗ್ಸ್ನಲ್ಲಿ 384 ರನ್ ಕಲೆಹಾಕಿದೆ. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ ದಾಖಲೆಯ ಶತಕ ಸಿಡಿಸಿ ಅಬ್ಬರಿಸಿದ್ದಾರೆ.
Updated on: Jan 06, 2026 | 8:36 AM

ಆ್ಯಶಸ್ ಸರಣಿಯಲ್ಲಿ ಟ್ರಾವಿಸ್ ಹೆಡ್ (Travis Head) ಸಿಡಿಲಬ್ಬರ ಮುಂದುವರೆದಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಈ ಸರಣಿಯ 5ನೇ ಪಂದ್ಯದಲ್ಲೂ ಹೆಡ್ ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ಅದು ಕೂಡ ಅತೀ ವೇಗದಲ್ಲಿ ಎಂಬುದು ವಿಶೇಷ. ಈ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು ಪ್ರಥಮ ಇನಿಂಗ್ಸ್ನಲ್ಲಿ 384 ರನ್ ಕಲೆಹಾಕಿದ್ದರು.

ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಶುರು ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಟ್ರಾವಿಸ್ ಹೆಡ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದ ಹೆಡ್ ಇಂಗ್ಲೆಂಡ್ ಬೌಲರ್ಗಳ ಬೆಂಡೆತ್ತಲಾರಂಭಿಸಿದರು. ಪರಿಣಾಮ ಟ್ರಾವಿಸ್ ಬ್ಯಾಟ್ನಿಂದ 105 ಎಸೆತಗಳಲ್ಲಿ ಶತಕ ಮೂಡಿಬಂತು.

ಭರ್ಜರಿ ಸೆಂಚುರಿ ಬಳಿಕ ಕೂಡ ಸ್ಪೋಟಕ ಇನಿಂಗ್ಸ್ ಮುಂದುವರೆಸಿದ ಹೆಡ್ 150 ರನ್ಗಳಿಸಲು ತೆಗೆದುಕೊಂಡಿದ್ದು ಕೇವಲ 152 ಎಸೆತಗಳನ್ನು ಮಾತ್ರ. ಈ ಮೂಲಕ ಆ್ಯಶಸ್ ಸರಣಿಯ ಇತಿಹಾಸದಲ್ಲೇ 160 ಕ್ಕಿಂತ ಕಡಿಮೆ ಎಸೆತಗಳಲ್ಲಿ ಎರಡು ಬಾರಿ 150 ರನ್ ಕಲೆಹಾಕಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ 2021ರ ಆ್ಯಶಸ್ ಸರಣಿಯಲ್ಲಿ ಟ್ರಾವಿಸ್ ಹೆಡ್ 143 ಎಸೆತಗಳಲ್ಲಿ 150 ರನ್ ಬಾರಿಸಿದ್ದರು. ಇದೀಗ 152 ಎಸೆತಗಳ ಮೂಲಕ 150 ರನ್ ಕಲೆಹಾಕಿ 140 ವರ್ಷಗಳ ಆ್ಯಶಸ್ ಸರಣಿ ಇತಿಹಾಸದಲ್ಲೇ ಯಾರಿಂದಲೂ ಸಾಧ್ಯವಾಗದ ವಿಶೇಷ ದಾಖಲೆಯನ್ನು ಟ್ರಾವಿಸ್ ಹೆಡ್ ತಮ್ಮದಾಗಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಆ್ಯಶಸ್ ಸರಣಿಯೊಂದರಲ್ಲಿ 3 ಸೆಂಚುರಿ ಸಿಡಿಸಿದ ಆರಂಭಿಕ ದಾಂಡಿಗರ ಪಟ್ಟಿಯಲ್ಲೂ ಹೆಡ್ ಸ್ಥಾನ ಪಡೆದಿದ್ದಾರೆ. ಇದಕ್ಕೂ ಮುನ್ನ ಮೊದಲ ಟೆಸ್ಟ್ ಪಂದ್ಯದಲ್ಲಿ 123 ರನ್ ಬಾರಿಸಿದ್ದರು. ಇನ್ನು ದ್ವಿತೀಯ ಮ್ಯಾಚ್ನಲ್ಲಿ 170 ರನ್ ಸಿಡಿಸಿದ್ದರು. ಇದೀಗ 163 ರನ್ ಕಲೆಹಾಕಿದ್ದಾರೆ. ಈ ಮೂಲಕ ಮ್ಯಾಥ್ಯೂ ಹೇಡನ್ ಬಳಿಕ ಆಸ್ಟ್ರೇಲಿಯಾ ಪರ ಆ್ಯಶಸ್ ಸರಣಿಯೊಂದರಲ್ಲಿ 3 ಸೆಂಚುರಿ ಸಿಡಿಸಿದ ಆರಂಭಿಕ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ 166 ಎಸೆತಗಳನ್ನು ಎದುರಿಸಿದ ಟ್ರಾವಿಸ್ ಹೆಡ್ 1 ಸಿಕ್ಸ್ ಹಾಗೂ 24 ಫೋರ್ಗಳೊಂದಿಗೆ 163 ರನ್ ಬಾರಿಸಿದ್ದಾರೆ. ಈ ಭರ್ಜರಿ ಸೆಂಚುರಿ ನೆರವಿನೊಂದಿಗೆ ಆಸ್ಟ್ರೇಲಿಯಾ ತಂಡವು 74 ಓವರ್ಗಳ ಮುಕ್ತಾಯದ ವೇಳೆ 4 ವಿಕೆಟ್ ಕಳೆದುಕೊಂಡು 311 ರನ್ ಕಲೆಹಾಕಿದೆ.
