
ಚುಟುಕು ಕ್ರಿಕೆಟ್ನಲ್ಲಿ ವೈಭವ್ ಸೂರ್ಯವಂಶಿಯ (Vaibhav Suryavanshi) ಸಿಡಿಲಬ್ಬರ ಮುಂದುವರೆದಿದೆ. ಅದು ಕೂಡ ಕೇವಲ 32 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ. ಈ ಶತಕದೊಂದಿಗೆ 14 ವರ್ಷದ ಯುವ ದಾಂಡಿಗ ಹಲವು ದಾಖಲೆಗಳನ್ನು ಸಹ ನಿರ್ಮಿಸಿದ್ದಾರೆ.

ದೋಹಾದಲ್ಲಿ ನಡೆದ ಏಷ್ಯಾಕಪ್ ರೈಸಿಂಗ್ ಸ್ಟಾರ್ ಟೂರ್ನಿಯ 2ನೇ ಪಂದ್ಯದಲ್ಲಿ ಭಾರತ ಎ ಹಾಗೂ ಯುಎಇ ಎ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತದ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ಮೊದಲ ಓವರ್ನಿಂದಲೇ ಅಬ್ಬರಿಸಲಾರಂಭಿಸಿದ ವೈಭವ್ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹಾಫ್ ಸೆಂಚುರಿ ಬಳಿಕ ಶತಕ ಪೂರೈಸಲು ತೆಗೆದುಕೊಂಡಿದ್ದು ಕೇವಲ 15 ಎಸೆತಗಳನ್ನು ಮಾತ್ರ. ಅಂದರೆ 32 ಎಸೆತಗಳಲ್ಲಿ ಶತಕ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದರು.

ಈ ಶತಕದೊಂದಿಗೆ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಸೆಂಚುರಿ ಸಿಡಿಸಿದ ವಿಶ್ವದ ಅತ್ಯಂತ ಕಿರಿಯ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡರು. ಅಷ್ಟೇ ಅಲ್ಲದೆ ಟಿ20 ಪಂದ್ಯದಲ್ಲಿ ಅತೀ ವೇಗದ ಸೆಂಚುರಿ ಬಾರಿಸಿದ ಅತೀ ಕಡಿಮೆ ವಯಸ್ಸಿನ ಆಟಗಾರ ಎಂಬ ಹೆಗ್ಗಳಿಕೆಯನ್ನು ಸಹ ತಮ್ಮದಾಗಿಸಿಕೊಂಡರು.

ಇದಲ್ಲದೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗದ ಸೆಂಚುರಿ ಸಿಡಿಸಿದ ವಿಶ್ವದ 6ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಅಭಿಷೇಕ್ ಶರ್ಮಾ (28), ಉರ್ವಿಲ್ ಪಟೇಲ್ (28) ಹಾಗೂ ರಿಷಭ್ ಪಂತ್ (32) ಬಳಿಕ ಟಿ20 ಪಂದ್ಯದಲ್ಲಿ ಅತೀ ಕಡಿಮೆ ಎಸೆತಗಳಲ್ಲಿ ಶತಕ ಬಾರಿಸಿದ ಭಾರತದ ನಾಲ್ಕನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಕೇವಲ 42 ಎಸೆತಗಳನ್ನು ಎದುರಿಸಿದ ವೈಭವ್ ಸೂರ್ಯವಂಶಿ 15 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ 144 ರನ್ ಚಚ್ಚಿದರು. ಈ ಸ್ಫೋಟಕ ಸೆಂಚುರಿಯೊಂದಿಗೆ ಭಾರತ ಎ ತಂಡ 20 ಓವರ್ಗಳಲ್ಲಿ 297 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಯುಎಇ ಎ ತಂಡವು 20 ಓವರ್ಗಳಲ್ಲಿ 149 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಭಾರತ ಎ ತಂಡವು 148 ರನ್ಗಳ ಭರ್ಜರಿ ಜಯ ಸಾಧಿಸಿದೆ.

ಇತ್ತ ಸ್ಫೋಟಕ ಸೆಂಚುರಿ ಸಿಡಿಸಿದ ವೈಭವ್ ಸೂರ್ಯವಂಶಿ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ. ಒಟ್ಟಿನಲ್ಲಿ ಭಾರತ ಎ ಪರ ಕಣಕ್ಕಿಳಿದ ಮೊದಲ ಟಿ20 ಪಂದ್ಯದಲ್ಲೇ ವೈಭವ್ ತನ್ನ ವೈಭವೋಪೇತ ಬ್ಯಾಟಿಂಗ್ ಪ್ರದರ್ಶಿಸಿದ್ದು, ಈ ವಿಸ್ಫೋಟಕ ಬ್ಯಾಟಿಂಗ್ನೊಂದಿಗೆ ಟಿ20 ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾಗೆ ಎಂಟ್ರಿ ಕೊಡುವ ತನ್ನ ಪ್ರಯತ್ನವನ್ನು ಮುಂದುವರೆಸಿದ್ದಾರೆ.