
2026 ರ ಅಂಡರ್-19 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ರನ್ ಗಳಿಸುವಲ್ಲಿ ವಿಫಲರಾಗಿದ್ದ ವೈಭವ್ ಸೂರ್ಯವಂಶಿ ಇದೀಗ ಎರಡನೇ ಪಂದ್ಯದಲ್ಲೇ ಎಲ್ಲರಿಗೂ ಉತ್ತರ ನೀಡಿದ್ದಾರೆ. ಟೂರ್ನಿಯ ಎರಡನೇ ಪಂದ್ಯದಲ್ಲಿ ಭಾರತ ಯುವ ತಂಡ ಬಾಂಗ್ಲಾದೇಶ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ವೈಭವ್ ಬಿರುಗಾಳಿಯ ಅರ್ಧಶತಕ ಗಳಿಸುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಈ ಪಂದ್ಯದಲ್ಲಿ ಟೀಂ ಇಂಡಿಯಾಗೆ ಉತ್ತಮ ಆರಂಭ ಸಿಗಲಿಲ್ಲ. ಆದಾಗ್ಯೂ ಒಂದೆಡೆ ತಂಡದ ಇನ್ನಿಂಗ್ಸ್ ನಿಭಾಯಿಸುತ್ತಾ ಗಮನಾರ್ಹ ಪ್ರದರ್ಶನ ನೀಡಿದ ವೈಭವ್ ಸೂರ್ಯವಂಶಿ ಪಂದ್ಯಾವಳಿಯ ವೇಗದ ಅರ್ಧಶತಕವನ್ನು ಗಳಿಸಿದ್ದಲ್ಲದೆ, ವಿಶ್ವಕಪ್ ಇತಿಹಾಸದಲ್ಲಿ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಬುಲವಾಯೊದಲ್ಲಿ ನಡೆದ ಈ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮೂರನೇ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಆದಾಗ್ಯೂ, ವೈಭವ್ ಸೂರ್ಯವಂಶಿ ಅದ್ಭುತವಾಗಿ ಬ್ಯಾಟಿಂಗ್ ಮಾಡುವುದನ್ನು ಮುಂದುವರೆಸಿದರು. ಮೂರನೇ ವಿಕೆಟ್ ಅವರ ಕಣ್ಣೆದುರೇ ಬಿದ್ದರೂ, ವೈಭವ್ ತಮ್ಮ ದಾಳಿಯನ್ನು ಮುಂದುವರಿಸಿ 13 ನೇ ಓವರ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದರು.

13 ನೇ ಓವರ್‌ನ ಕೊನೆಯ ಎಸೆತದಲ್ಲಿ ಸಿಂಗಲ್ ಗಳಿಸುವ ಮೂಲಕ ವೈಭವ್ ಅರ್ಧಶತಕ ಪೂರೈಸಿದರು. ಈ ಮೂಲಕ ಅವರು ಅಂಡರ್-19 ವಿಶ್ವಕಪ್‌ನಲ್ಲಿ ತಮ್ಮ ಮೊದಲ ಅರ್ಧಶತಕ ಪೂರೈಸಿದಲ್ಲದೆ ದಾಖಲೆಯನ್ನೂ ಸೃಷ್ಟಿಸಿದರು. ಕೇವಲ 30 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ ವೈಭವ್ ಅರ್ಧಶತಕ ಪೂರೈಸಿದರು. ಇದು ಈ ವಿಶ್ವಕಪ್‌ನಲ್ಲಿ ಅತ್ಯಂತ ವೇಗದ ಅರ್ಧಶತಕವಾಗಿದೆ.

ಅಷ್ಟೇ ಅಲ್ಲ, ಅಂಡರ್-19 ವಿಶ್ವಕಪ್ ಇತಿಹಾಸದಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ವೈಭವ್ ಪಾತ್ರರಾದರು. ವೈಭವ್ ಕೇವಲ 14 ವರ್ಷ ಮತ್ತು 296 ದಿನಗಳಲ್ಲಿ ಈ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ಅಫ್ಘಾನಿಸ್ತಾನದ ಶಾಹಿದುಲ್ಲಾ ಕಮಲ್ (15 ವರ್ಷ, 19 ದಿನಗಳು) ಅವರು ಈ ದಾಖಲೆಯನ್ನು ಹೊಂದಿದ್ದರು.

ವೈಭವ್ ಅರ್ಧಶತಕ ಗಳಿಸಿದಾಗ ತಂಡದ ಸ್ಕೋರ್ ಕೇವಲ 68 ರನ್ ಆಗಿತ್ತು. ಈ ಅವಧಿಯಲ್ಲಿ ವೈಭವ್, ಅಭಿಗ್ಯಾನ್ ಕುಂಡು ಅವರೊಂದಿಗೆ 62 ರನ್ಗಳ ಮಹತ್ವದ ಪಾಲುದಾರಿಕೆಯನ್ನು ನೀಡಿ ತಂಡವನ್ನು 100 ರನ್ಗಳ ಗಡಿ ದಾಟಿಸಿದರು. ಆದಾಗ್ಯೂ, ವೈಭವ್ ತಮ್ಮ ಶತಕವನ್ನು ಪೂರ್ಣಗೊಳಿಸಲು ಸಾಧ್ಯವಾಗದೆ 72 ರನ್ಗಳಿಗೆ ಔಟಾದರು.

27 ನೇ ಓವರ್‌ನಲ್ಲಿ ವೇಗಿ ಇಕ್ಬಾಲ್ ಹೊಸೈನ್ ಎಮನ್ ಅವರನ್ನು ಔಟ್ ಮಾಡಿದರು. ವೈಭವ್ ಕೇವಲ 67 ಎಸೆತಗಳಲ್ಲಿ 72 ರನ್ ಗಳ ಇನ್ನಿಂಗ್ಸ್ ಆಡಿದರು, ಇದರಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಗಳು ಸೇರಿದ್ದವು. ಅವರ ನಂತರ, ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಅಭಿಗ್ಯಾನ್ ಕುಂಡು ಕೂಡ ಟೀಂ ಇಂಡಿಯಾ ಪರ ಅರ್ಧಶತಕ ಬಾರಿಸಿದರು.