
ಟಿ20 ಹಾಗೂ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಶೀಘ್ರದಲ್ಲೇ ಏಕದಿನ ಕ್ರಿಕೆಟ್ಗೂ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಮುಂಬರುವ ಏಕದಿನ ವಿಶ್ವಕಪ್ಗಾಗಿ ಇಬ್ಬರನ್ನು ಪರಿಗಣಿಸುವುದಿಲ್ಲ. ಹೀಗಾಗಿ ಶೀಘ್ರದಲ್ಲೇ ಏಕದಿನ ಕ್ರಿಕೆಟ್ ಭವಿಷ್ಯವನ್ನು ನಿರ್ಧರಿಸುವಂತೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.

ಕೆಲ ತಿಂಗಳ ಹಿಂದೆಯಷ್ಟೇ ಟೆಸ್ಟ್ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ 2027ರ ಏಕದಿನ ವಿಶ್ವಕಪ್ನಲ್ಲಿ ಕಣಕ್ಕಿಳಿಯುವ ಆಶಾಭಾವನೆ ವ್ಯಕ್ತಪಡಿಸಿದ್ದರು. ಆದರೆ ಈ ವೇಳೆಗೆ ರೋಹಿತ್ ಶರ್ಮಾ ವಯಸ್ಸು 40 ಆಗಿರಲಿದೆ. ಇನ್ನು ವಿರಾಟ್ ಕೊಹ್ಲಿಯ ವಯಸ್ಸು 38 ಕ್ಕೆ ತಲುಪಲಿದೆ. ಹೀಗಾಗಿ ಏಕದಿನ ವಿಶ್ವಕಪ್ಗೆ ಹಿರಿಯ ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆಯಿಲ್ಲ.

ಇದೇ ಕಾರಣದಿಂದಾಗಿ ಶೀಘ್ರದಲ್ಲೇ ಏಕದಿನ ಕ್ರಿಕೆಟ್ ಭವಿಷ್ಯ ನಿರ್ಧರಿಸುವಂತೆ ಹಿಟ್ಮ್ಯಾನ್ ಹಾಗೂ ಕಿಂಗ್ ಕೊಹ್ಲಿಗೆ ಸೂಚನೆ ನೀಡಲಾಗಿದೆ. ಅಲ್ಲದೆ 2027ರ ಏಕದಿನ ವಿಶ್ವಕಪ್ಗಾಗಿ ಈಗಲೇ ಯುವ ಪಡೆಯನ್ನು ಒಳಗೊಂಡಿರುವ ಬಲಿಷ್ಠ ತಂಡವೊಂದನ್ನು ರೂಪಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸುತ್ತಿದೆ. ಈ ಹಿನ್ನಲೆಯಲ್ಲಿ ಇದೇ ವರ್ಷ ಏಕದಿನ ಕ್ರಿಕೆಟ್ನಿಂದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಗೇಟ್ ಪಾಸ್ ಸಿಗುವ ಸಾಧ್ಯತೆಯಿದೆ.

ಅತ್ತ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಅಂತ್ಯಗೊಳ್ಳುವುದನ್ನು ಪುಷ್ಠೀಕರಿಸುವಂತೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ದಿಗ್ಗಜರಿಬ್ಬರಿಗೆ ವಿಶೇಷ ಬೀಳ್ಕೊಡುಗೆ ನೀಡಲು ಪ್ಲ್ಯಾನ್ ರೂಪಿಸಿರುವ ಮಾಹಿತಿ ಕೂಡ ಹೊರಬಿದ್ದಿದೆ. ಅಂದರೆ ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಏಕದಿನ ಸರಣಿಯ ವೇಳೆ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ವಿಶೇಷ ಗೌರವ ಸಲ್ಲಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಚಿಂತಿಸಿದೆ ಸಿಇಒ ಟಾಡ್ ಗ್ರೀನ್‌ಬರ್ಗ್ ತಿಳಿಸಿದ್ದಾರೆ. ಹೀಗಾಗಿ ಈ ಸರಣಿಯು ದಿಗ್ಗಜರಿಬ್ಬರ ಕೊನೆಯ ಇಂಟರ್ನ್ಯಾಷನಲ್ ಮ್ಯಾಚ್ ಆಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿಯು ಅಕ್ಟೋಬರ್ 19 ರಿಂದ ಶುರುವಾಗಲಿದೆ. ಮೂರು ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್ ಪರ್ತ್ನಲ್ಲಿ ನಡೆದರೆ, ಅಕ್ಟೋಬರ್ 23 ರಂದು ಅಡಿಲೇಡ್ನಲ್ಲಿ 2ನೇ ಪಂದ್ಯ ಜರುಗಲಿದೆ. ಹಾಗೆಯೇ ಅಕ್ಟೋಬರ್ 25 ರಂದು ನಡೆಯುವ ಕೊನೆಯ ಏಕದಿನ ಪಂದ್ಯಕ್ಕೆ ಸಿಡ್ನಿ ಕ್ರಿಕೆಟ್ ಗ್ರೌಂಡ್ ಆತಿಥ್ಯವಹಿಸಲಿದೆ. ಈ ಸರಣಿಯೊಂದಿಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಅಂತಾರಾಷ್ಟ್ರೀಯ ಕೆರಿಯರ್ ಕೊನೆಗೊಂಡರೂ ಅಚ್ಚರಿಪಡಬೇಕಿಲ್ಲ.
Published On - 2:09 pm, Thu, 7 August 25