Updated on: Jan 10, 2023 | 5:12 PM
ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ 29 ರನ್ ಪೂರೈಸುವುದರೊಂದಿಗೆ ಏಕದಿನ ಕ್ರಿಕೆಟ್ನಲ್ಲಿ 12500 ರನ್ ಪೂರೈಸಿದ ವಿಶೇಷ ಸಾಧಕರ ಪಟ್ಟಿಗೆ ಕಿಂಗ್ ಕೊಹ್ಲಿ ಸೇರ್ಪಡೆಯಾದರು.
ಅದರಲ್ಲೂ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್ನಲ್ಲಿ 12500 ರನ್ ಬಾರಿಸಿದ 2ನೇ ಬ್ಯಾಟ್ಸ್ಮನ್ ಎನಿಸಿಕೊಂಡರು. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ ಈ ಸಾಧನೆ ಮಾಡಿದ್ದರು. ಇದೀಗ ಈ ದಾಖಲೆ ಬರೆದ 2ನೇ ಭಾರತೀಯನಾಗಿ ವಿರಾಟ್ ಕೊಹ್ಲಿ ಹೊರಹೊಮ್ಮಿದ್ದಾರೆ.
ಇನ್ನು ಈ ಸಾಧನೆ ಮಾಡಿದ ವಿಶ್ವದ 6ನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೂ ಕಿಂಗ್ ಕೊಹ್ಲಿ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್, ಕುಮಾರ್ ಸಂಗಾಕ್ಕರ, ರಿಕಿ ಪಾಂಟಿಂಗ್, ಸನತ್ ಜಯಸೂರ್ಯ ಹಾಗೂ ಮಹೇಲ ಜಯವರ್ಧನೆ ಮಾತ್ರ ಏಕದಿನ ಕ್ರಿಕೆಟ್ನಲ್ಲಿ 12500+ ರನ್ ಕಲೆಹಾಕಿದ್ದಾರೆ. ಇದೀಗ ಈ ಪಟ್ಟಿಗೆ 6ನೇ ಬ್ಯಾಟರ್ ಆಗಿ ಕಿಂಗ್ ಕೊಹ್ಲಿ ಎಂಟ್ರಿ ಕೊಟ್ಟಿರುವುದು ವಿಶೇಷ.
ಅಷ್ಟೇ ಅಲ್ಲದೆ ಏಕದಿನ ಕ್ರಿಕೆಟ್ನಲ್ಲಿ 12 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ಏಕೈಕ ಸಕ್ರೀಯ ಬ್ಯಾಟ್ಸ್ಮನ್ ಎಂಬ ಹಿರಿಮೆಗೂ ಕೊಹ್ಲಿ ಪಾತ್ರರಾಗಿದ್ದಾರೆ. ಪ್ರಸ್ತುತ ಆಡುತ್ತಿರುವ ಯಾವುದೇ ಬ್ಯಾಟ್ಸ್ಮನ್ ಒನ್ಡೇ ಕ್ರಿಕೆಟ್ನಲ್ಲಿ 12000+ ರನ್ ಕಲೆಹಾಕಿಲ್ಲ. ಇತ್ತ ಕಿಂಗ್ ಕೊಹ್ಲಿ 12500 ಕ್ಕೂ ಅಧಿಕ ರನ್ ಬಾರಿಸುವ ಮೂಲಕ ರನ್ ಸರದಾರ ಎನಿಸಿಕೊಂಡಿದ್ದಾರೆ.
ಸದ್ಯ 257 ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ 45 ಶತಕ ಹಾಗೂ 64 ಅರ್ಧಶತಕದೊಂದಿಗೆ 12584 ರನ್ ಕಲೆಹಾಕಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಸರದಾರನಾಗಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇದ್ದು, ಕ್ರಿಕೆಟ್ ದೇವರು 452 ಇನಿಂಗ್ಸ್ ಮೂಲಕ 18426 ರನ್ ಗಳಿಸಿದ್ದಾರೆ.