Updated on: Jan 10, 2023 | 9:29 PM
ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಬ್ಬರಿಸುವ ಮೂಲಕ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದ ಕೊಹ್ಲಿ 80 ಎಸೆತಗಳಲ್ಲಿ ಶತಕ ಪೂರೈಸಿದರು. ಅಲ್ಲದೆ 87 ಎಸೆತಗಳಲ್ಲಿ 12 ಫೋರ್ ಹಾಗೂ 1 ಸಿಕ್ಸ್ನೊಂದಿಗೆ 113 ರನ್ ಬಾರಿಸಿದರು. ಈ ಶತಕದೊಂದಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆಯನ್ನು ಕಿಂಗ್ ಕೊಹ್ಲಿ ಮುರಿದಿರುವುದು ವಿಶೇಷ.
ಹೌದು, ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್ ಅತ್ಯಧಿಕ ಶತಕ ಬಾರಿಸಿದ ವಿಶ್ವ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಕ್ರಿಕೆಟ್ ದೇವರು ಲಂಕಾ ವಿರುದ್ಧವೇ 8 ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದ್ದರು. ಇದೀಗ ಈ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ.
ಗುವಹಾಟಿಯಲ್ಲಿ ಶ್ರೀಲಂಕಾ ವಿರುದ್ಧ ಶತಕ ಪೂರೈಸುವುದರೊಂದಿಗೆ ಶ್ರೀಲಂಕಾ ವಿರುದ್ಧ ಅತ್ಯಧಿಕ ಸೆಂಚುರಿ ಸಿಡಿಸಿದ ವಿಶೇಷ ವಿಶ್ವ ದಾಖಲೆ ಕಿಂಗ್ ಕೊಹ್ಲಿ ಪಾಲಾಗಿದೆ. ಕೊಹ್ಲಿ ಇದುವರೆಗೆ ಲಂಕಾ ವಿರುದ್ಧ 9 ಶತಕ ಬಾರಿಸಿದ್ದಾರೆ. ಈ ಮೂಲಕ ಸಿಂಹಳೀಯರ ವಿರುದ್ಧದ ಶತಕದ ಸರದಾರನಾಗಿ ವಿರಾಟ್ ಕೊಹ್ಲಿ ಹೊರಹೊಮ್ಮಿದ್ದಾರೆ.
ಇದಲ್ಲದೆ, ಭಾರತದಲ್ಲಿ ಅತ್ಯಧಿಕ ಶತಕ ಬಾರಿಸಿದ ಸಚಿನ್ ತೆಂಡೂಲ್ಕರ್ ದಾಖಲೆಯನ್ನೂ ಕೂಡ ಕೊಹ್ಲಿ ಸರಿಗಟ್ಟಿದ್ದರು. ಸಚಿನ್ ತವರಿನಲ್ಲಿ 164 ಏಕದಿನ ಪಂದ್ಯಗಳಲ್ಲಿ 20 ಶತಕಗಳನ್ನು ಸಿಡಿಸಿದ್ದರು.
ಇದೀಗ ಶ್ರೀಲಂಕಾ ವಿರುದ್ಧದ ಶತಕದೊಂದಿಗೆ ಕೊಹ್ಲಿ ಕೂಡ ಭಾರತದ ಪಿಚ್ನಲ್ಲಿ 20 ಶತಕ ಪೂರೈಸಿದ್ದಾರೆ. ವಿಶೇಷ ಎಂದರೆ ಕೊಹ್ಲಿ ತವರಿನಲ್ಲಿ 20 ಶತಕ ಬಾರಿಸಲು ತೆಗೆದುಕೊಂಡಿರುವುದು ಕೇವಲ 102 ಇನಿಂಗ್ಸ್ ಮಾತ್ರ. ಇದರೊಂದಿಗೆ ತವರಿನ ಶತಕದ ಸರದಾರ ಎಂಬ ಮಾಸ್ಟರ್ ಬ್ಲಾಸ್ಟರ್ ಅವರ ಮತ್ತೊಂದು ದಾಖಲೆಯನ್ನು ಕಿಂಗ್ ಕೊಹ್ಲಿ ಸರಿಗಟ್ಟಿದ್ದಾರೆ.