
15 ವರ್ಷಗಳ ಬಳಿಕ ವಿಜಯ ಹಝಾರೆ ಟೂರ್ನಿಯಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ (Virat Kohli) ಇದೀಗ ಭರ್ಜರಿ ದಾಖಲೆಯೊಂದಿಗೆ ಮರಳಿದ್ದಾರೆ. ಅದು ಕೂಡ ದಿನೇಶ್ ಕಾರ್ತಿಕ್ ಹೆಸರಿನಲ್ಲಿದ್ದ ದೇಶೀಯ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಈ ಬಾರಿಯ ವಿಜಯ ಹಝಾರೆ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ 2 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಮೊದಲ ಪಂದ್ಯದಲ್ಲಿ ಆಂಧ್ರ ಪ್ರದೇಶ್ ವಿರುದ್ಧ 131 ರನ್ ಬಾರಿಸಿದ್ದ ಕಿಂಗ್ ಕೊಹ್ಲಿ ದ್ವಿತೀಯ ಮ್ಯಾಚ್ನಲ್ಲಿ ಗುಜರಾತ್ ವಿರುದ್ಧ 77 ರನ್ ಕಲೆಹಾಕಿದ್ದರು. ಈ ಎರಡು ಇನಿಂಗ್ಸ್ಗಳ ಮೂಲಕ ಕೊಹ್ಲಿ ವಿಜಯ ಹಝಾರೆ ಟೂರ್ನಿಯಲ್ಲಿ 1000 ರನ್ ಪೂರೈಸಿದ್ದಾರೆ.

ಈ ಒಂದು ಸಾವಿರ ರನ್ಗಳೊಂದಿಗೆ ವಿರಾಟ್ ಕೊಹ್ಲಿ ದೇಶೀಯ ಅಂಗಳದಲ್ಲೂ ಇತಿಹಾಸ ನಿರ್ಮಿಸಿದ್ದಾರೆ. ಅಂದರೆ ವಿಜಯ ಹಝಾರೆ ಟೂರ್ನಿಯಲ್ಲಿ ಅತೀ ವೇಗವಾಗಿ 1000 ರನ್ ಕಲೆಹಾಕಿದ ಭರ್ಜರಿ ದಾಖಲೆ ಇದೀಗ ವಿರಾಟ್ ಕೊಹ್ಲಿಯ ಹೆಸರಿಗೆ ಸೇರ್ಪಡೆಯಾಗಿದೆ.

ಇದಕ್ಕೂ ಮುನ್ನ ಈ ದಾಖಲೆ ದಿನೇಶ್ ಕಾರ್ತಿಕ್ ಹೆಸರಿನಲ್ಲಿತ್ತು. ವಿಜಯ ಹಝಾರೆ ಟೂರ್ನಿಯಲ್ಲಿ ತಮಿಳುನಾಡು ಪರ ಕಣಕ್ಕಿಳಿಯುತ್ತಿದ್ದ ದಿನೇಶ್ ಕಾರ್ತಿಕ್ 18 ಇನಿಂಗ್ಸ್ಗಳ ಮೂಲಕ 1000 ರನ್ ಪೂರೈಸಿದ್ದರು. ಇದೀಗ ಈ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ.

ದೆಹಲಿ ಪರ ಈವರೆಗೆ 15 ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ 4 ಶತಕ ಹಾಗೂ 4 ಅರ್ಧಶತಕಗಳೊಂದಿಗೆ 1027 ರನ್ ಪೂರೈಸಿದ್ದಾರೆ. ಈ ಮೂಲಕ ವಿಜಯ ಹಝಾರೆ ಟೂರ್ನಿ ಇತಿಹಾಸದಲ್ಲೇ ಅತೀ ವೇಗವಾಗಿ ಸಾವಿರ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.